ಚೀನಾದ‌ ಕಂಪೆನಿಗಳಿಂದ 45 ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲು ಭಾರತ ಸಜ್ಜು

Update: 2021-02-22 15:48 GMT

ಹೊಸದಿಲ್ಲಿ,ಫೆ.22: ಗಡಿಯಲ್ಲಿ ಮಿಲಿಟರಿ ಉದ್ವಿಗ್ನತೆ ಶಮನಗೊಂಡಿರುವುದರಿಂದ ಚೀನಾದಿಂದ 45 ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲು ಭಾರತವು ಸಜ್ಜಾಗಿದ್ದು, ಗ್ರೇಟ್ ವಾಲ್ ಮೋಟರ್ ಮತ್ತು ಎಸ್ಎಐಸಿ ಮೋಟರ್ ಕಾರ್ಪ್ (ಹಿಂದಿನ ಶಾಂಘೈ ಆಟೋಮೋಟಿವ್ ಇಂಡಸ್ಟ್ರಿ ಕಾರ್ಪೊರೇಷನ್)ನ ಪ್ರಸ್ತಾವಗಳು ಇವುಗಳಲ್ಲಿ ಸೇರುವ ಸಾಧ್ಯತೆಗಳಿವೆ ಎಂದು ಸರಕಾರಿ ಮತ್ತು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಚೀನಿ ಪಡೆಗಳ ಅತಿಕ್ರಮಣಕ್ಕೆ ಪ್ರತೀಕಾರವಾಗಿ ದೇಶದಲ್ಲಿ ಚೀನಿ ಹೂಡಿಕೆಗಳ ಮೇಲಿನ ನಿಯಂತ್ರಣಗಳನ್ನು ಭಾರತವು ಬಿಗಿಗೊಳಿಸಿದ ಬಳಿಕ ಕಳೆದೊಂದು ವರ್ಷದಿಂದಲೂ ಈ ಪ್ರಸ್ತಾವಗಳು ನನೆಗುದಿಯಲ್ಲಿವೆ. ಬಿಕ್ಕಟ್ಟಿಗೆ ಭಾರತ ಕಾರಣ ಎಂದು ಚೀನಾ ಆರೋಪಿಸಿತ್ತು.

ಎರಡು ಶತಕೋಟಿ ಡಾಲರ್ ಗೂ ಅಧಿಕ ಮೌಲ್ಯದ ಸುಮಾರು 150 ಚೀನಾ ಪ್ರಸ್ತಾವಗಳು ಅತಂತ್ರಗೊಂಡಿವೆ. ಗೃಹ ಸಚಿವಾಲಯದ ನೇತೃತ್ವದ ಅಂತರ ಸಚಿವಾಲಯ ಸಮಿತಿಯು ಇಂತಹ ಪ್ರಸ್ತಾವಗಳನ್ನು ಇನ್ನಷ್ಟು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದ್ದರಿಂದ ಹಾಂಕಾಂಗ್ ಮೂಲಕ ಹೂಡಿಕೆಯನ್ನು ಮಾಡುತ್ತಿದ್ದ ಜಪಾನ್ ಮತ್ತು ಅಮೆರಿಕದ ಕಂಪನಿಗಳು ಸಹ ನನೆಗುದಿಯಲ್ಲಿ ಬಿದ್ದಿವೆ.

ಮೊದಲ ಹಂತದಲ್ಲಿ ಒಪ್ಪಿಗೆಯನ್ನು ಪಡೆಯಲಿರುವ 45 ಪ್ರಸ್ತಾವಗಳಲ್ಲಿ ಹೆಚ್ಚಿನವು ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಯೊಡ್ಡದ ತಯಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿವೆ ಎಂದು ಪಟ್ಟಿಯನ್ನು ನೋಡಿರುವ ಸರಕಾರಿ ಮೂಲಗಳು ತಿಳಿಸಿವೆ.

ಗ್ರೇಟ್ ವಾಲ್ ಮತ್ತು ಜನರಲ್ ಮೋಟರ್ಸ್(ಜಿಎಂ) ಕಳೆದ ವರ್ಷ ಭಾರತದಲ್ಲಿಯ ಜಿಎಂ ಕಾರು ತಯಾರಿಕೆ ಸ್ಥಾವರವನ್ನು ಖರೀದಿಸಲು ಗ್ರೇಟ್ ವಾಲ್ಗೆ ಅನುಮತಿ ಕೋರಿ ಜಂಟಿ ಪ್ರಸ್ತಾವವನ್ನು ಸಲ್ಲಿಸಿದ್ದವು. ಈ ವ್ಯವಹಾರವು ಸುಮಾರು 25-30 ಕೋಟಿ ಡಾಲರ್ಗಳದ್ದಾಗಬಹುದೆಂದು ನಿರೀಕ್ಷಿಸಲಾಗಿದೆ.

2019ರಲ್ಲಿ ತನ್ನ ಬ್ರಿಟಿಷ್ ಬ್ರಾಂಡ್ ಎಂಜಿ ಮೋಟರ್ ನ ಅಡಿ ಭಾರತದಲ್ಲಿ ಕಾರುಗಳ ಮಾರಾಟವನ್ನು ಆರಂಭಿಸಿದ್ದ ಎಸ್ಎಐಸಿ ಭಾರತಕ್ಕಾಗಿ ತಾನು ಮೀಸಲಿಟ್ಟಿರುವ ಸುಮಾರು 65 ಕೋಟಿ ಡಾಲರ್ ಗಳ ಪೈಕಿ ಸುಮಾರು 40 ಕೋಟಿ ಡಾಲರ್ ಗಳನ್ನು ಈಗಾಗಲೇ ಹೂಡಿಕೆ ಮಾಡಿದೆ. ಅದು ಇನ್ನಷ್ಟು ಹೂಡಿಕೆಗಾಗಿ ಅನುಮತಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News