ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್‌ಗೆ ಹೈಕೋರ್ಟ್ ನೋಟಿಸ್

Update: 2021-02-22 16:26 GMT

ಹೊಸದಿಲ್ಲಿ, ಫೆ.22: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಹೈಕೋರ್ಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಇತರ ಆರೋಪಿಗಳಿಗೆ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟ್ ಜರ್ನಲ್ಸ್ ಲಿ.ಸಂಸ್ಥೆಯು 90.25 ಕೋಟಿ ರೂ. ಸಾಲದ ಹೊರೆಯಲ್ಲಿತ್ತು. 2010ರಲ್ಲಿ ಯಂಗ್ ಇಂಡಿಯಾ(ವೈಐ) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ನ್ಯಾಷನಲ್ ಹೆರಾಲ್ಡ್‌ನ ಹಕ್ಕನ್ನು (90.25 ಕೋಟಿ ರೂ.ಸಾಲದ ಸಹಿತ) ವರ್ಗಾಯಿಸಲಾಗಿತ್ತು.

ಗಾಂಧಿ ಕುಟುಂಬದ ನಿಷ್ಟರಾಗಿದ್ದ ಸ್ಯಾಮ್ ಪಿತ್ರೋಡ, ಸುಮನ್ ದುಬೆ ಯಂಗ್ ಇಂಡಿಯಾದ ನಿರ್ದೇಶಕರಾಗಿದ್ದರು. ಯಂಗ್ ಇಂಡಿಯಾವು ನ್ಯಾಷನಲ್ ಹೆರಾಲ್ಡ್ ಅನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ 50 ಲಕ್ಷ ರೂ. ಪಾವತಿಯಾಗಿದ್ದು ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಎಐಸಿಸಿ ಖಜಾಂಚಿಯಾಗಿದ್ದ ಮೋತಿಲಾಲ್ ವೋರ, ಸುಮನ್ ದುಬೆ, ಸ್ಯಾಮ್ ಪಿತ್ರೋಡ ಮತ್ತು ಯಂಗ್ ಇಂಡಿಯಾ ಸಂಸ್ಥೆ ಆರೋಪಿಗಳು ಎಂದು ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಈ ಆರೋಪವನ್ನು ಸೋನಿಯಾ ಸಹಿತ ಎಲ್ಲಾ ಆರೋಪಿಗಳೂ ನಿರಾಕರಿಸಿದ್ದಾರೆ. ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುರೇಶ್ ಕೈಟ್ ನೋಟಿಸ್ ಜಾರಿಗೊಳಿಸಿ ಎಪ್ರಿಲ್ 12ರೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News