ಕಲ್ಲಿದ್ದಲು ಪ್ರಕರಣ: ಟಿಎಂಸಿ ಸಂಸದರ ನಾದಿನಿಯ ವಿಚಾರಣೆ ನಡೆಸಿದ ಸಿಬಿಐ

Update: 2021-02-22 16:33 GMT

ಕೋಲ್ಕತಾ, ಫೆ.22: ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐನ ಅಧಿಕಾರಿಗಳ ತಂಡವೊಂದು ಸೋಮವಾರ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ ನಾದಿನಿ ಮೇನಕಾ ಗಂಭೀರ್ ಅವರ ಕೋಲ್ಕತಾ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.

ಅಭಿಷೇಕ್ ಬ್ಯಾನರ್ಜಿಯ ಪತ್ನಿ ರುರಿಜ ಬ್ಯಾನರ್ಜಿಯ ಸಹೋದರಿಯಾಗಿರುವ ಮೇನಕಾ ಗಂಭೀರ್‌ಗೆ ರವಿವಾರ ಸಿಬಿಐ ನೋಟಿಸ್ ಜಾರಿಗೊಳಿಸಿತ್ತು. ಸೋಮವಾರ ಮೇನಕಾ ನಿವಾಸಕ್ಕೆ ಆಗಮಿಸಿದ ಸಿಬಿಐಯ ಮಹಿಳಾ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ. ರುರಿಜ ಬ್ಯಾನರ್ಜಿಗೂ ಸಿಬಿಐ ನೋಟಿಸ್ ಜಾರಿಗೊಳಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ಮಂಗಳವಾರ ತನ್ನ ನಿವಾಸಕ್ಕೆ ಆಗಮಿಸಿ ವಿಚಾರಣೆ ನಡೆಸುವಂತೆ ಕೋರಿದ್ದಾರೆ.

ಇದಕ್ಕೆ ಸಿಬಿಐ ಒಪ್ಪಿದ್ದು ಮಂಗಳವಾರ(ಫೆ.23ರಂದು) ವಿಚಾರಣೆ ನಡೆಯಲಿದೆ ಎಂದಿದೆ. ಅಭಿಷೇಕ್ ಬ್ಯಾನರ್ಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ. ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಕರಣದ ಸೂತ್ರದಾರ ಎನ್ನಲಾದ ಮಾಂಝಿ ಆಲಿಯಾಸ್ ಲಾಲ, ಈಸ್ಟರ್ನ್ ಕೋಲ್‌ಫೀಲ್ಡ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಅಮಿತ್ ಕುಮಾರ್ ಧಾರ್, ಜಯೇಶ್ ಚಂದ್ರ ರಾಯ್, ಭದ್ರತಾ ಸಿಬಂದಿ ವಿಭಾಗದ ಮುಖ್ಯಸ್ಥ ತನ್ಮಯ್ ದಾಸ್, ಪ್ರಾದೇಶಿಕ ಭದ್ರತಾ ಅಧಿಕಾರಿಗಳಾದ ಧನಂಜಯ್ ರಾಯ್ ಮತ್ತು ದೇಬಶಿಷ್ ಮುಖರ್ಜಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News