ರಾಜ್ಯಗಳಲ್ಲಿ ಮಾರ್ಚ್ 7ರ ಒಳಗೆ ವಿಧಾನ ಸಭೆ ಚುನಾವಣೆ ದಿನಾಂಕ ಘೋಷಣೆ: ಪ್ರಧಾನಿ ಸುಳಿವು

Update: 2021-02-22 17:15 GMT

ಲಕ್ನೋ, ಫೆ. 22: ವಿಧಾನ ಸಭೆ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಮಾರ್ಚ್ 7ರ ಒಳಗೆ ಘೋಷಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸುಳಿವು ನೀಡಿದ್ದಾರೆ. ಅಸ್ಸಾಂನ ಧೇಮಾಜಿ ಜಿಲ್ಲೆಯ ಸಿಲಾಪತ್ತಾರ್ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 2016ರಲ್ಲಿ ವಿಧಾನ ಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ 4ರಂದು ಘೋಷಿಸಲಾಗಿತ್ತು. ಈ ವರ್ಷ ಚುನಾವಣಾ ಆಯೋಗ ವಿಧಾನ ಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ 7ರ ಒಳಗೆ ಘೋಷಿಸುವ ಸಾಧ್ಯತೆ ಇದೆ ಎಂಬುದು ನನ್ನ ಗ್ರಹಿಕೆ ಎಂದರು. 

ಚುನಾವಣಾ ದಿನಾಂಕ ಘೋಷಣೆ ವಿಚಾರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು. ಆದರೆ, ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡುವ ವರೆಗೆ ನಾನು ಪಶ್ಚಿಮಬಂಗಾಳ, ಪುದುಚೇರಿ, ತಮಿಳುನಾಡು ಹಾಗೂ ಕೇರಳಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿದರು. ಅಸ್ಸಾಂ, ಪಶ್ಚಿಮಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗಳಲ್ಲಿ ವಿಧಾನ ಸಭೆ ಚುನಾವಣೆ ಎಪ್ರಿಲ್ ಹಾಗೂ ಮೇಯಲ್ಲಿ ನಡೆಯುವ ಸಾಧ್ಯತೆ ಇದೆ. ಜನವರಿ 21ರಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ನೇತೃತ್ವದ ಚುನಾವಣಾ ಆಯೋಗದ ಪೂರ್ಣ ಪೀಠ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿದೆ. 

ಕೋಲ್ಕತ್ತಾದಲ್ಲಿ ಉನ್ನತ ಅಧಿಕಾರಿಗಳು ಹಾಗೂ ಪಶ್ಚಿಮಬಂಗಾಳದ ಎಲ್ಲ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದೆ ಹಾಗೂ ಅವರ ಅಳಲು, ಸಲಹೆಗಳನ್ನು ಆಲಿಸಿದೆ. ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರಾ ಹಾಗೂ ರಾಜೀವ್ ಕುಮಾರ್ ಕೂಡ ಅರೋರಾ ಅವರ ಜೊತೆಗಿದ್ದರು.

ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಅರಿವಿರುವ ಚುನಾವಣಾ ಆಯೋಗ ಚುನಾವಣೆ ಸಂದರ್ಭ ಅರೆಸೇನಾ ಪಡೆಗಳ ಸಂಖ್ಯೆಯನ್ನು ಏರಿಕೆ ಮಾಡಲು ಸಲಹೆ ನೀಡಿದೆ. ಪಾರದರ್ಶಕ ಹಾಗೂ ಮುಕ್ತ ಮತದಾನ ನಡೆಯಲು ರಾಜ್ಯದಲ್ಲಿ ಈಗಿರುವ ಸ್ಥಿರ ಹಾಗೂ ಚರ ಮೂಲಭೂತ ಸೌಕರ್ಯಗಳ ವರದಿ ಕೋರಿದ್ದಾರೆ.

ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಉತ್ತಮವಾಗಿ ನಿರ್ವಹಿಸಲು ಕಳೆದ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಹೆಚ್ಚು ಮತಗಟ್ಟೆಗಳು ಬೇಕು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News