"ಠಾಣೆಯಲ್ಲಿ ಥಳಿಸಲಾಗಿತ್ತು, ರೈತರನ್ನು ಬೆಂಬಲಿಸಿದ್ದಕ್ಕೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು"

Update: 2021-02-23 13:04 GMT

ಚಂಡೀಗಢ: ಕಳೆದ ತಿಂಗಳ ಜನವರಿ 12ರಂದು ಸೋನಿಪತ್ ಪೊಲೀಸರು ತಮ್ಮನ್ನು ಬಂಧಿಸಿದ ನಂತರ ಠಾಣೆಯಲ್ಲಿ ತಮಗೆ ತೀವ್ರವಾಗಿ ಥಳಿಸಲಾಗಿತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನವದೀಪ್ ಕೌರ್  ಹೇಳಿದ್ದಾರೆ.

ತಮ್ಮ ವೈದ್ಯಕೀಯ ಪರೀಕ್ಷೆಯನ್ನೂ ನಡೆಸದೆ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 54 ಉಲ್ಲಂಘಿಸಲಾಗಿದೆ ಎಂದು ಪಂಜಾಬ್‍ನ ಮುಖ್ತಸರ್ ಜಿಲ್ಲೆಯವರಾದ 23 ವರ್ಷದ ನವದೀಪ್ ಕೌರ್ ಆರೋಪಿಸಿದ್ದಾರೆ. ಕೌರ್ ಅವರನ್ನು ಸದ್ಯ ಹರಿಯಾಣದ ಕರ್ನಲ್ ಕಾರಾಗೃಹದಲ್ಲಿರಿಸಲಾಗಿದೆ.

ಆಕೆಯ ಜಾಮೀನು ಅರ್ಜಿ ಮೇಲಿನ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮುಂದೂಡಿತ್ತಲ್ಲದೆ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ನಿಗದಿಪಡಿಸಿದೆ. ತಾವು ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿರುವುದರಿಂದ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದೂ ಆಕೆ ಆರೋಪಿಸಿದ್ದಾರೆ.

ಮಜ್ದೂರ್ ಅಧಿಕಾರ್ ಸಂಘಟನ್ ಸದಸ್ಯೆಯಾಗಿರುವ ನವದೀಪ್ ಕೌರ್ ಅವರು ಕೃಷಿ ಕಾನೂನುಗಳ ವಿರುದ್ಧ ಸೋನಿಪತ್ ಜಿಲ್ಲೆಯ ಕುಂಡ್ಲಿ ಎಂಬಲ್ಲಿ ಪ್ರತಿಭಟನೆಗೆ ಜನರನ್ನು ಸೇರಿಸಿದ್ದರು. ರೈತರ ಬೆಂಬಲಾರ್ಥ ಸ್ಥಳೀಯ ಕಾರ್ಮಿಕರನ್ನೂ ಪ್ರತಿಭಟನೆಗೆ ಕರೆ ತಂದಿರುವುದು ಆಡಳಿತದ ಕಣ್ಣು ಕೆಂಪಾಗಿಸಿತ್ತು. ಈ ಕಾರಣದಿಂದಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಯೋಜನೆ ಹೂಡಲಾಯಿತು ಎಂದು ಆಕೆ ತಮ್ಮ ಅಪೀಲಿನಲ್ಲಿ ದೂರಿದ್ದಾರೆ.

ಜನವರಿ 12ರಂದು ಕೌರ್ ನೇತೃತ್ವದಲ್ಲಿ ಸಂಘಟನ್ ಸದಸ್ಯರು ಫ್ಯಾಕ್ಟರಿಯೊಂದರತ್ತ ಮೆರವಣಿಗೆ ನಡೆಸಿ ಕಾರ್ಮಿಕರ ಬಾಕಿ ವೇತನ ಪಾವತಿಗೆ ಆಗ್ರಹಿಸಿದ್ದರು. ಆಗ ಕೈಗಾರಿಕೆಗಳ ಮಾಲಕರ ಸಂಘಟನೆಯವರು ಹಲ್ಲೆ ನಡೆಸಿದ್ದರು. ನಂತರ ಅಲ್ಲಿಗೆ ಆಗಮಿಸಿದ ಪೊಲೀಸರು ಕೌರ್ ರ  ಕೂದಲೆಳೆದು ದಬ್ಬಿದಾಗ ಪ್ರತಿಭಟನಾಕಾರರು ಆಕ್ರೋಶಗೊಂಡ ಕಾರಣ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಅಪೀಲಿನಲ್ಲಿ ಹೇಳಲಾಗಿದೆ. ಆದರೆ ಪ್ರಕರಣ ಸಂಬಂಧ ಕೌರ್ ಒಬ್ಬರನ್ನೇ ಬಂಧಿಸಲಾಗಿತ್ತಲ್ಲದೆ ಆಕೆಗೆ ಹಿಂಸೆ ನೀಡಿ ಥಳಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಠಾಣೆಗೆ ಕರೆದೊಯ್ದಾಗ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿಯಿರಲಿಲ್ಲ ಎಂದೂ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News