ನಕಲಿ ʼಫಿಂಗರ್‌ ಪ್ರಿಂಟ್‌ʼ ಬಳಸಿ 500 ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿದ್ದ ಜಾಲವನ್ನು ಪತ್ತೆಹಚ್ಚಿದ ಪೊಲೀಸರು

Update: 2021-02-23 13:28 GMT

ಬರೇಲಿ,ಫೆ.23: ತದ್ರೂಪಿ ಬೆರಳಚ್ಚುಗಳನ್ನು ಸೃಷ್ಟಿಸಿ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳ ಸುಮಾರು 500 ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ್ದ ಜಾಲವೊಂದನ್ನು ಭೇದಿಸಿರುವ ಉತ್ತರ ಪ್ರದೇಶದ ಶಾಹಜಹಾನ್ಪುರದ ಪೊಲೀಸರು ಪ್ರಮುಖ ಆರೋಪಿ ಗೌರವ್ (26) ಎಂಬಾತ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪದವೀಧರನಾಗಿದ್ದು ಶಾಹಜಹಾನ್ಪುರದ ಕಾಂತ್ ಪ್ರದೇಶದಲ್ಲಿ ಫೋಟೊ ಕಾಪಿ ಅಂಗಡಿಯನ್ನು ಹೊಂದಿರುವ ಗೌರವ್ ಹೇಳುವಂತೆ, ತದ್ರೂಪಿ ಬೆರಳಚ್ಚೊಂದನ್ನು ಸೃಷ್ಟಿಸಲು ಕೇವಲ ಐದು ರೂ.ಸಾಕು. ಗ್ಲೂ ಗನ್ ಮತ್ತು ಅಂಟನ್ನು ಬಳಸಿ ತದ್ರೂಪಿ ಬೆರಳಚ್ಚುಗಳನ್ನು ಸೃಷ್ಟಿಸುವುದನ್ನು ಆನ್ ಲೈನ್‌ ನಲ್ಲಿ ಕಲಿತಿದ್ದ ಆತ ‘ಬ್ಯಾಂಕ್ ಮಿತ್ರ’ರೊಂದಿಗೆ ಸೇರಿಕೊಂಡು ಪಿಎಂ ಕಿಸಾನ್ ಸಮ್ಮಾನ್ ಯೋಜನಾ,‌ ವೃದ್ಧಾಪ್ಯ ವೇತನ ಇತ್ಯಾದಿ ಸರಕಾರಿ ಯೋಜನೆಗಳ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಫಲಾನುಭವಿಗಳ ಸುಮಾರು 500 ತದ್ರೂಪಿ ಬೆರಳಚ್ಚುಗಳು,ಆಧಾರ್ ಕಾರ್ಡ್ಗಳು ಮತ್ತು ಬ್ಯಾಂಕ್ ಪಾಸ್‌ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಇಂತಹ ಗ್ಯಾಂಗ್‌ ಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸರಕಾರದಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬಂದಿಲ್ಲ ಎಂದು ಹಲವಾರು ಫಲಾನುಭವಿಗಳು ಪದೇ ಪದೇ ದೂರಿಕೊಂಡ ಬಳಿಕ ಶಾಹಜಹಾನ್ಪುರ ಪೊಲೀಸರು ಜಿಲ್ಲೆಯ ಜಲಾಲಾಬಾದ್ನಿಂದ ಕಾರ್ಯಾಚರಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದರೂ ಬಳಿಕ ಅದನ್ನು ಬ್ಯಾಂಕ್ ಮಿತ್ರರು ನಡೆಸುವ ಸುವಿಧಾ ಕೇಂದ್ರಗಳ ಮೂಲಕ ಹಿಂದೆಗೆದುಕೊಳ್ಳಲಾಗಿತ್ತು ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗೌರವ್ ಗ್ಲೂ ಗನ್ ಮತ್ತು ಅಂಟು ಬಳಸಿ ಬ್ಯಾಂಕ್ ಮಿತ್ರರಿಗಾಗಿ ತದ್ರೂಪಿ ಬೆರಳಚ್ಚುಗಳನ್ನು ಸೃಷ್ಟಿಸುತ್ತಿದ್ದ ಮತ್ತು ಇಂತಹ ಪ್ರತಿ ಬೆರಳಚ್ಚಿಗೆ ಐದು ರೂ.ಗಿಂತ ಕಡಿಮೆ ವೆಚ್ಚವಾಗುತ್ತಿತ್ತು ಎಂದಿರುವ ಪೊಲೀಸರು, ಆರೋಪಿ ಗೌರವ್ ಜಿಲ್ಲೆಯಲ್ಲಿ ಇತರ ಗ್ಯಾಂಗ್ಗಳೊಂದಿಗೂ ಶಾಮೀಲಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News