ಐಸಿಸ್ ನಂಟು ಆರೋಪದಲ್ಲಿ ಜೈಲುಪಾಲಾಗಿದ್ದ ವ್ಯಕ್ತಿಗೆ ಜಾಮೀನು ನೀಡಿಕೆಯನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್

Update: 2021-02-23 14:05 GMT
photo: Theindianexpress

ಮುಂಬೈ,ಫೆ.23: ಇಸ್ಲಾಮಿಕ್ ಸ್ಟೇಟ್ನೊಂದಿಗೆ ಸಂಬಂಧವನ್ನು ಹೊಂದಿರುವ ಆರೋಪಿ,ಠಾಣೆ ಜಿಲ್ಲೆಯ ಕಲ್ಯಾಣ ನಿವಾಸಿ ಆರೀಬ್ ಮಜೀದ್ ಎಂಬಾತನಿಗೆ ವಿಶೇಷ ಎನ್ಐಎ ನ್ಯಾಯಾಲಯವು ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಕಳೆದ ಆರು ವರ್ಷಗಳಿಂದಲೂ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕೊಳೆಯುತ್ತಿರುವ ಮಜೀದ್ ವಿಚಾರಣೆ ಬಾಕಿಯಿರುವಂತೆ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಜಾಮೀನುದಾರರನ್ನು ನೀಡಿದ ಬಳಿಕ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾನೆ. ಕಲ್ಯಾಣವನ್ನು ತೊರೆಯದಂತೆ ಮತ್ತು ತನ್ನ ನಿವಾಸವನ್ನು ಬದಲಿಸದಂತೆ ಮಜೀದ್ ಗೆ ಷರತ್ತುಗಳನ್ನು ವಿಧಿಸಲಾಗಿದ್ದು,ಎರಡು ತಿಂಗಳುಗಳ ಕಾಲ ಪ್ರತಿನಿತ್ಯ ಎರಡು ಬಾರಿ ಮತ್ತು ನಂತರದ ಎರಡು ತಿಂಗಳುಗಳ ಕಾಲ ನಿತ್ಯ ಒಂದು ಬಾರಿ ಸಮೀಪದ ಪೊಲೀಸ್ ಠಾಣೆಗೆ ಹಾಜರಾಗಬೇಕಿದೆ.

ಎನ್ಐಎ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಉಚ್ಚ ನ್ಯಾಯಾಲಯವು,ಇದು ಸ್ವಾತಂತ್ರದ ಪ್ರಶ್ನೆಯಾಗಿದೆ ಮತ್ತು ಇಷ್ಟು ದೀರ್ಘಾವಧಿಗೆ ಆರೋಪಿಯನ್ನು ಬಂಧನದಲ್ಲಿಟ್ಟಿದ್ದು ಆತನ ಪರವಾಗಿ ಕೆಲಸ ಮಾಡಿದೆ ಎಂದು ಹೇಳಿತು.

ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಲಯದ 2020,ಮಾ.17ರ ಆದೇಶವನ್ನು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆಯಾದರೂ ಪ್ರಕರಣದ ಅರ್ಹತೆಗಳಿಗೆ ಸಂಬಂಧಿಸಿದ ಅದರ ಆದೇಶವನ್ನು ತಳ್ಳಿಹಾಕಿದೆ. ಮಜೀದ್ ಐಸಿಸ್ಗೆ ಸೇರ್ಪಡೆಗೊಳ್ಳಲು ಇರಾಕ್ ಮತ್ತು ಸಿರಿಯಾಕ್ಕೆ ಪ್ರಯಾಣಿಸಿದ್ದ ಎಂದು ಎನ್ಐಎ ಆರೋಪಿಸಿತ್ತು.

ಮಜೀದ್ 2020,ಮೇ ತಿಂಗಳಿನಲ್ಲಿ ಯಾತ್ರಿಕರ ಗುಂಪಿನೊಂದಿಗೆ ಇರಾಕ್ ಗೆ ತೆರಳಿದ್ದ. ಬಳಿಕ ಗುಂಪಿನಿಂದ ಪ್ರತ್ಯೇಕಗೊಂಡಿದ್ದ ಮಜೀದ್,ಅಮನ್ ತಾಂಡೇಲ್,ಫಹಾದ್ ಶೇಖ್ ಮತ್ತು ಸಾಹೀಮ್ ತಂಕಿ ಐಸಿಸ್ ಗೆ ಸೇರ್ಪಡೆಗೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಆರೋಪಿಸಿರುವ ಎನ್ಐಎ, ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆತ ಭಾರತಕ್ಕೆ ಮರಳಿದ ಬಳಿಕ 2014,ನ.28ರಂದು ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News