ಬಾಲಿವುಡ್‌ ಅನ್ನು ʼನಕಲಿʼ ಎಂದ ಇಮ್ರಾನ್‌ ಹಶ್ಮಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವುದಕ್ಕೆ ನೀಡಿದ ಕಾರಣವೇನು?

Update: 2021-02-23 16:50 GMT

ಮುಂಬೈ: ಸುಮಾರು ಎರಡು ದಶಕಗಳಿಂದ ಬಾಲಿವುಡ್ ಚಿತ್ರರಂಗದ ಭಾಗವಾಗಿರುವ ನಟ ಇಮ್ರಾನ್ ಹಶ್ಮಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಬಾಲಿವುಡ್‌ ಅನ್ನು ‘ನಕಲಿ’ ಎಂದು ಸಂಬೋಧಿಸಿದ್ದಾರೆ. ಬಾಲಿವುಡ್‌ ನ ಗ್ಲಾಮರಸ್‌ ಜೀವನ ಮತ್ತು ಪ್ರಚಾರದಿಂದ ತಾನು ದೂರ ಉಳಿದಿದ್ದೇಕೆ ಎನ್ನುವುದರ ಕುರಿತೂ ಅವರು ಹೇಳಿಕೆ ನೀಡಿದ್ದಾರೆ.

ಗ್ಲಾಮರ್‌ ಮತ್ತು ಪ್ರಚಾರದಿಂದ ದೂರ ಸರಿಯುವುದು ನನ್ನ ಕೆಲಸದ ಸಿದ್ಧಾಂತವಾಗಿದೆ ಎಂದ ಇಮ್ರಾನ್,‌ ಬಾಲಿವುಡ್‌ ನಲ್ಲಿ ಮುಖಸ್ತುತಿಗಾಗಿ ಮಾತನಾಡಿ ಬೆನ್ನ ಹಿಂದಿನಿಂದ ಚೂರಿ ಹಾಕುವ ಪ್ರಕ್ರಿಯೆ ಇದೆ ಹಾಗಾಗಿ ಬಾಲಿವುಡ್‌ ಫೇಕ್‌ (ನಕಲಿ) ಎಂದು ನಿಮಗೆ ಅನ್ನಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.

ರೇಡಿಯೋ ನಿರೂಪಕ ಸಿದ್ಧಾರ್ಥ್ ಕಣ್ಣನ್ ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಮ್ರಾನ್‌, “ಐಸಾ ತೋಹ್ ಹೈ (ಇದು ಸತ್ಯ). ಇದರ ಬಗ್ಗೆ ಎರಡು ಮಾತುಗಳಿಲ್ಲ. ಅದು ನಮ್ಮ ಉದ್ಯಮದ ಸತ್ಯ. ಆದರೆ ಕೇವಲ ಈ ಒಂದು ಕಾರಣದಿಂದ ಮಾತ್ರವಲ್ಲ. ವ್ಯಕ್ತಿಯ ವೈಯಕ್ತಿಕ ಜೀವನವು ಆತನ ವೃತ್ತಿಗಿಂತಲೂ ಹೆಚ್ಚಾಗಿರಬೇಕು ಎಂದು ನಾನು ಭಾವಿಸುತ್ತೇನೆ. ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕು” ಎಂದು ಹೇಳಿಕೆ ನೀಡಿದ್ದಾರೆ.

ವರ್ಷಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿರುವ ಸ್ನೇಹಿತರ ಕಾರಣದಿಂದ ನಾನೀಗ ಬಾಲಿವುಡ್‌ ನಿಂದ ದೂರವಿದ್ದೇನೆ. ಅವರಿಗೂ ಚಿತ್ರೋದ್ಯಮದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ಕುಟುಂಬವು ನನ್ನನ್ನು ಬೇರೂರುವಂತೆ ಮಾಡಿದೆ. ನಾನು ಹೆಚ್ಚಾಗಿ ನನ್ನ ಕುಟುಂಬಸ್ಥರ ಟೀಕೆಗಳನ್ನೇ ಸ್ವೀಕರಿಸುತ್ತೇನೆ. ಏಕೆಂದರೆ ಅದು ವಾಸ್ತವಿಕ ಶೈಲಿಯಲ್ಲಿರುತ್ತದೆ. ಸೆಟ್‌ನಲ್ಲಿ ಹೆಚ್ಚು ಸಮಯ ಕಳೆದ ನಂತರ ಚಿತ್ರರಂಗದಿಂದ ದೂರವಿರುವುದು ವಿವೇಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಇಮ್ರಾನ್‌ ಹೇಳಿಕೆ ನೀಡಿದ್ದಾರೆ.

ಸದ್ಯ, ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಂಜಯ್ ಗುಪ್ತಾ ನಿರ್ದೇಶನದ  ʼಮುಂಬೈ ಸಾಗಾʼ ಬಿಡುಗಡೆಗೆ ಇಮ್ರಾನ್ ಸಜ್ಜಾಗುತ್ತಿದ್ದಾರೆ. ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಕಾಜಲ್ ಅಗರ್ವಾಲ್, ಮಹೇಶ್ ಮಂಜ್ರೇಕರ್, ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ರೋಹಿತ್ ರಾಯ್, ಗುಲ್ಶನ್ ಗ್ರೋವರ್ ಮತ್ತು ಅಮೋಲ್ ಗುಪ್ಟೆ ಪ್ರಮುಖ ಪಾತ್ರಗಳಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News