ಟೈಗರ್ ವುಡ್ಸ್ ಕಾರು ಅಪಘಾತ : ಕಾಲಿಗೆ ಶಸ್ತ್ರಕ್ರಿಯೆ ನಡೆಸಿದ ವೈದ್ಯರು

Update: 2021-02-24 05:33 GMT
 Picture: Twitter

ಲಾಸ್ ಏಂಜಲಿಸ್ : ಖ್ಯಾತ ಗೋಲ್ಫ್ ಆಟಗಾರ ಟೈಗರ್ ವುಡ್ಸ್ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಅಪಘಾತಕ್ಕೀಡಾದ ಪರಿಣಾಮ ಕಾಲಿಗೆ ಗಂಭೀರ ಗಾಯಗೊಳಗಾಗಿರುವ ವುಡ್ಸ್ ಅವರಿಗೆ ಶಸ್ತ್ರಕ್ರಿಯೆ ನಡೆಸಲಾಗಿದೆ.

ವುಡ್ಸ್ ಅವರ ಕಾರು ರಸ್ತೆಯಂಚಿಗೆ ಜಾರಿ ನಂತರ ಕಂದಕಕ್ಕೆ ಉರುಳಿದೆ. ಟೈಗರ್ ವುಡ್ಸ್ ಅವರಿಗೆ ಉಂಟಾಗಿರುವ ಗಾಯಗಳು ಜೀವಕ್ಕೆ ಅಪಾಯವುಂಟು ಮಾಡುವಂತಹುದ್ದಲ್ಲ ಹಾಗೂ ರಕ್ಷಣಾ ಕಾರ್ಯಕರ್ತರು ಆಗಮಿಸಿದಾಗ ಅವರಿಗೆ ಪ್ರಜ್ಞೆಯಿತ್ತು ಎಂದು ಲಾಸ್ ಏಂಜಲಿಸ್ ಕೌಂಟಿ ಶೆರಿಫ್ ಹೇಳಿದ್ದಾರೆ ಆದರೆ ಅವರು ಈ ಅಪಘಾತದಲ್ಲಿ ಬದುಕುಳಿದಿರುವುದು ಅವರ  ಅದೃಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ಷಿಕ ಜೆನೆಸಿಸ್ ಇನ್ವಿಟೇಶನಲ್ ಗೋಲ್ಫ್ ಪಂದ್ಯಾವಳಿಯಲ್ಲಿ ಭಾಗವಹಿಸಲು ರಿವೇರಾ ಕಂಟ್ರಿ ಕ್ಲಬ್‍ಗೆ ಟೈಗರ್ ವುಡ್ಸ್ ಆಗಮಿಸಿದ್ದ ಸಂದರ್ಭ ಅವರು ಕಾರು ಚಲಾಯಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಕಡಿದಾದ ರಸ್ತೆ ತಿರುವಿನಲ್ಲಿ ಪಾಲೊಸ್ ವೆರ್ಡೆಸ್ ಎಂಬಲ್ಲಿ ಅಪಘಾತ ಸಂಭವಿಸಿದ್ದು ಇದು ಅಪಘಾತ ವಲಯವೆಂದೇ ಕುಖ್ಯಾತಿ ಪಡೆದಿದೆ. ಅಪಘಾತದ ವೇಳೆ ವುಡ್ಸ್ ಅವರು ಯಾವುದೇ ಡ್ರಗ್ಸ್ ಅಥವ ಮದ್ಯದ ನಶೆಯಲ್ಲಿದ್ದಿದ್ದಂತೆ ಕಂಡು ಬಂದಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಜಗತ್ತು ಕಂಡ ಯಶಸ್ವೀ ಗೋಲ್ಫ್ ಆಟಗಾರರಲ್ಲೊಬ್ಬರಾಗಿರುವ ಟೈಗರ್ ವುಡ್ಸ್ 15 ಪ್ರಮುಖ ಗೋಲ್ಫ್ ಚಾಂಪಿಯನ್‍ಶಿಪ್ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಅವರು ಐದನೇ ಬಾರಿ ಬೆನ್ನಿನ ಶಸ್ತ್ರಕ್ರಿಯೆಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News