ಸೂರತ್‌ನಲ್ಲಿ ‘ಆಪ್’ ಗೆಲುವು ಹೊಸ ರಾಜಕೀಯ ಪರ್ವಕ್ಕೆ ನಾಂದಿ: ಕೇಜ್ರೀವಾಲ್

Update: 2021-02-24 17:18 GMT

ಹೊಸದಿಲ್ಲಿ, ಫೆ.24: ಗುಜರಾತ್‌ನ ನಗರಪಾಲಿಕೆ ಚುನಾವಣೆಯ ಮೂಲಕ ಗುಜರಾತ್ ಜನತೆ ರಾಜ್ಯದಲ್ಲಿ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.

ಸೂರತ್ ನಗರಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮುಖ್ಯ ವಿರೋಧ ಪಕ್ಷದ ಜವಾಬ್ದಾರಿಯನ್ನು ಜನತೆ ನೀಡಿದ್ದು ಇಲ್ಲಿ 125 ವರ್ಷದ ಹಿರಿಯ ಪಕ್ಷವಾದ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದ್ದಾರೆ. ಜನತೆ ನೀಡಿದ ಜವಾಬ್ದಾರಿಯನ್ನು ಗೆದ್ದ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ನಿಭಾಯಿಸಲಿದ್ದಾರೆ ಎಂದವರು ವೀಡಿಯೊ ಸಂದೇಶದ ಮೂಲಕ ಭರವಸೆ ನೀಡಿದ್ದಾರೆ.

ಗುಜರಾತ್, ಪ್ರಾಮಾಣಿಕತೆ, ಉತ್ತಮ ಶಾಲೆ, ಆಸ್ಪತ್ರೆಯ ವ್ಯವಸ್ಥೆ ಮತ್ತು ದಿನದ 24 ಗಂಟೆಯೂ ಕಡಿಮೆ ವೆಚ್ಚದ ವಿದ್ಯುತ್‌ವ್ಯವಸ್ಥೆ ಒದಗಿಸುವ ಹೊಸ ರಾಜಕೀಯ ಪರ್ವದ ಆರಂಭಕ್ಕೆ ನಾಂದಿ ಹಾಡಿದೆ. ಗುಜರಾತ್‌ನ ಅಭಿವೃದ್ಧಿ ಕಾರ್ಯದಲ್ಲಿ ಆಮ್ ಆದ್ಮಿ ಪಕ್ಷ ಜನತೆಯೊಂದಿಗೆ ಕೈಜೋಡಿಸಲಿದೆ. ರಾಜ್ಯದ ಜನತೆಗೆ ವೈಯಕ್ತಿಕ ಅಭಿನಂದನೆ ಸಲ್ಲಿಸಲು ಶುಕ್ರವಾರ ಗುಜರಾತ್‌ಗೆ ಭೇಟಿ ನೀಡುವುದಾಗಿ ಕೇಜ್ರೀವಾಲ್ ಹೇಳಿದ್ದಾರೆ. ಗುಜರಾತ್‌ನ 6 ನಗರಪಾಲಿಕೆಗಳ 576 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 483, ಕಾಂಗ್ರೆಸ್ 55, ಆಮ್ ಆದ್ಮಿ ಪಕ್ಷ 27 ಸ್ಥಾನದಲ್ಲಿ ಜಯ ಸಾಧಿಸಿದೆ. ಆಮ್ ಆದ್ಮಿ ಪಕ್ಷಕ್ಕೆ ದೊರೆತ 27 ಸ್ಥಾನಗಳೂ ಸೂರತ್‌ನಲ್ಲಿ ಲಭ್ಯವಾಗಿವೆ. ಇಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News