ಪ್ರವೇಶ ನಿರ್ಬಂಧ ಸರಿಯಲ್ಲ

Update: 2021-02-24 18:02 GMT

ಮಾನ್ಯರೇ.

ಕೇರಳದಲ್ಲಿ ಕೊರೋನ ಹೆಚ್ಚುತ್ತಿರುವ ಕಾರಣ ನೀಡಿ ದ.ಕ. ಜಿಲ್ಲಾಡಳಿತ ತರಾತುರಿಯಿಂದ ಕೇರಳಿಗರ ಪ್ರವೇಶ ನಿರ್ಬಂಧಿಸಿದೆ. ಪ್ರಾಕಿನ ತುಳುನಾಡಿನ ಅವಿಭಾಜ್ಯ ಪ್ರದೇಶವಾದ ಕಾಸರಗೋಡಿನ ಗಡಿ ಪ್ರದೇಶದ ಲಕ್ಷಾಂತರ ಜನರು ತಲ್ಲಣಿಸಿದ್ದಾರೆ. ಇಂತಹ ನಿರ್ಣಯವನ್ನು ವೈರಾಣು ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆದು ಪುನರ್ ಪರಿಶೀಲನೆ ಮಾಡದಿದ್ದರೆ ಆಡಳಿತ ಮುಂದೆ ಜನಾಕ್ರೋಶಕ್ಕೆ ಕಾರಣವಾದೀತು.

ಸೀಮಿತ ಜನಸಂಖ್ಯೆಯ ಮುಂದುವರಿದ ನಾಗರಿಕ ಸಮಾಜದ ಪಾಶ್ಚಾತ್ಯ ರಾಷ್ಟ್ರಗಳ ಕೊರೋನ ನಿಯಮಾವಳಿಗಳನ್ನು ಭಾರತದಂತಹ ದೇಶದಲ್ಲಿ ಕಣ್ಮುಚ್ಚಿ ಅಳವಡಿಸುವುದು ಸಾಧುವಲ್ಲ. ಐಸೋಲೇಶನ್‌ನ ಏಕಾಂಗಿತನ, ಪ್ರಯೋಗ ಮಾಡಿದ ಔಷಧಗಳ ಅಡ್ಡಪರಿಣಾಮ, ರೋಗಿಗೆ ಮೊದಲೇ ಇದ್ದ ಪ್ರಾಣಾಂತಿಕ ಕಾಯಿಲೆಗಳ ಕಡೆಗಣನೆ ಮೊದಲಾದ ಕಾರಣಗಳಿಂದ ಶೇಕಡಾ ಒಂದಕ್ಕಿಂತಲೂ ಕಡಿಮೆ ಮಾರಣಾಂತಿಕತೆಯನ್ನು ಈ ವರೆಗೆ ದಾಖಲಿಸಿದ ಕೊರೋನ ವ್ಯಾಧಿಗೆ ಈ ಪರಿಯ ಉತ್ಸವ ಮಾಡುವ ಅಧಿಕಾರಿಗಳ ಆದೇಶ ಪ್ರಳಯಾಂತಕ. ವಿದೇಶಗಳಿಂದಲೂ ಬೇಡಿಕೆ ಕಂಡಿರುವ ಕೈಗೆಟಕುವ ಭಾರತೀಯ ಲಸಿಕೆ ಇರುವಾಗ, ಮನೆಯಲ್ಲಿದ್ದುಕೊಂಡೇ ತೆಗೆದುಕೊಳ್ಳುವ ಸಾಮಾನ್ಯ ಔಷಧಗಳಿಂದಲೇ ಶೇ. 99 ಕೊರೋನ ರೋಗಿಗಳು ಗುಣಮುಖರಾಗುತ್ತಿರುವಾಗ ಇಂತಹ ಕಠಿಣ ಕ್ರಮಗಳು ವ್ಯವಸ್ಥೆಯನ್ನು ಮತ್ತಷ್ಟು ಭ್ರಷ್ಟಗೊಳಿಸುವುದಕ್ಕೆ ಸೀಮಿತ.

ಈ ಹಿಂದಿನ ಲಾಕ್‌ಡೌನ್ ಕಾರಣದಿಂದ ಕುಸಿತಕಂಡ ಆರ್ಥಿಕತೆಯನ್ನು ಸರಿದೂಗಿಸುವ ಸರಕಾರದ ಪ್ರಯತ್ನದ ಪರಿಣಾಮವಾದ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಜನತೆಯ ಬದುಕು ಇನ್ನೂ ಸುಟ್ಟು ಹೋದೀತು. ಇಂದು ಸಾಮಾಜಿಕ ಮಾಧ್ಯಮಗಳಿಂದ ಕ್ಷಣಮಾತ್ರದಲ್ಲಿ ಜನಾಭಿಪ್ರಾಯ ಪಡೆದುಕೊಳ್ಳಬಹುದಾದ ತಂತ್ರಜ್ಞಾನ ಕೈಯಲ್ಲಿರುವಾಗ ಆತುರದ ನಿರ್ಧಾರಗಳಿಂದ ಹಾಸ್ಯಾಸ್ಪದಗೊಳ್ಳುವುದು ಯಾಕೆ? ಇನ್ನಾದರೂ ಅಧಿಕಾರದ ಅಮಲು, ತೆವಲು ಬದಲಾಗದಿದ್ದರೆ ಜನತೆಗೆ ಒಳ್ಳೆಯ ದಿನಗಳು ಎಂಬ ಪ್ರಧಾನಿ ಮೋದಿಯವರ ಆಶಯ ಕನ್ನಡಿಯೊಳಗಿನ ಗಂಟು.

Writer - -ಡಾ. ರಾಮಚಂದ್ರ ಕೆ., ಕನ್ಯಾನ

contributor

Editor - -ಡಾ. ರಾಮಚಂದ್ರ ಕೆ., ಕನ್ಯಾನ

contributor

Similar News