ಶೇ. 85ರಷ್ಟು ಜಾಹೀರಾತು ಆದಾಯ ನಮಗೆ ನೀಡಿ: ಗೂಗಲ್ ಇಂಡಿಯಾಗೆ ಪತ್ರ ಬರೆದ ಇಂಡಿಯನ್ ನ್ಯೂಸ್‍ಪೇಪರ್ ಸೊಸೈಟಿ

Update: 2021-02-25 13:24 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಗೂಗಲ್ ಮತ್ತು ಫೇಸ್ ಬುಕ್ ಸಂಸ್ಥೆಗಳು ತಾವು ಬಳಸುವ ಆಸ್ಟ್ರೇಲಿಯಾದ ಸುದ್ದಿಗಳಿಗೆ ಅಲ್ಲಿನ ಸುದ್ದಿ ಮಾಧ್ಯಮಗಳಿಗೆ ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾ ಸಂಸತ್ತು ಕಾನೂನು ಅನುಮೋದಿಸಿದ ಬೆನ್ನಿಗೇ ಭಾರತದ 800ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿ ಸಂಸ್ಥೆಯಾಗಿರುವ ಇಂಡಿಯನ್ ನ್ಯೂಸ್‍ಪೇಪರ್ ಸೊಸೈಟಿ ಕೂಡ ಗೂಗಲ್ ಮುಂದೆ ಇಂತಹುದೇ ಬೇಡಿಕೆ ಮುಂದಿಟ್ಟಿದೆ.

ತಮ್ಮ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಬಳಸುವುದಕ್ಕೆ ಗೂಗಲ್ ಸುದ್ದಿ ಪತ್ರಿಕೆಗಳಿಗೆ ಹಣ ಪಾವತಿಸಬೇಕು ಹಾಗೂ ತನ್ನ ಜಾಹೀರಾತು ಆದಾಯದ ಶೇ. 85ರಷ್ಟನ್ನು ಹಂಚಬೇಕು ಎಂದು ಸಂಸ್ಥೆ ಬೇಡಿಕೆ ಸಲ್ಲಿಸಿದೆ.

ಐಎನ್‍ಎಸ್ ಅಧ್ಯಕ್ಷರಾದ ಎಲ್ ಆದಿಮೂಲಂ ಈ ಕುರಿತು ಗೂಗಲ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಂಜಯ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ. "ದೈನಿಕಗಳು ಸಾವಿರಾರು ಪತ್ರಕರ್ತರಿಗೆ ಉದ್ಯೋಗ ನೀಡಿ ಅವರ ಮೂಲಕ ಸಿದ್ಧಪಡಿಸುವ ವರದಿಗಳನ್ನು ಪ್ರಕಟಿಸುವುದಕ್ಕೆ ಗೂಗಲ್ ಹಣ ನೀಡಬೇಕು,'' ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

"ಸುದ್ದಿ ಮಾಧ್ಯಮದ ಆರ್ಥಿಕ ಬೆನ್ನೆಲುಬು ಜಾಹೀರಾತು ಆಗಿದೆ. ಆದರೆ ಡಿಜಿಟಲ್ ಲೋಕದಲ್ಲಿ ಜಾಹೀರಾತು ಆದಾಯದ ತಮ್ಮ ಪಾಲು ಇತ್ತೀಚೆಗೆ ಕಡಿಮೆಯಾಗುತ್ತಿರುವುದನ್ನು ಪತ್ರಿಕಾ ಸಂಸ್ಥೆಗಳು ಕಂಡುಕೊಂಡಿವೆ, ಆದರೆ ಅದೇ ಸಮಯ ಗೂಗಲ್ ಜಾಹೀರಾತುಗಳಿಂದ ಬಹಳಷ್ಟು ಆದಾಯ ಗಳಿಸುತ್ತಿದೆ,'' ಎಂದು ಪತ್ರದಲ್ಲಿ ವಿವರಿಸಲಾಗಿದೆ.

"ನಕಲಿ ಸುದ್ದಿಗಳನ್ನು ತಡೆಗಟ್ಟಲು ನೈಜ ಸಂಸ್ಥೆಗಳ ಸಂಪಾದಕೀಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಗೂಗಲ್ ಸಾಕಷ್ಟು ವಿಶ್ವಾಸಾರ್ಹವಲ್ಲದೆ ಹಲವು ಸೈಟ್‍ಗಳಿಂದ ಕಂಟೆಂಟ್ ಪಡೆದುಕೊಳ್ಳುತ್ತಿದೆ, ಇದು ನಕಲಿ ಸುದ್ದಿಗಳ ಹರಡುವಿಕೆಗೆ ಕಾರಣವಾಗುತ್ತದೆ,'' ಎಂದು ಐಎನ್‍ಎಸ್ ತನ್ನ ಪತ್ರದಲ್ಲಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News