ತೈಲ ಬೆಲೆ ಏರಿಕೆ ವಿರೋಧಿಸಿ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಸಂಚರಿಸಿದ ಮಮತಾ ಬ್ಯಾನರ್ಜಿ

Update: 2021-02-25 18:08 GMT

ಕೋಲ್ಕತಾ, ಫೆ. 25: ತೈಲ ಬೆಲೆ ಏರಿಕೆ ವಿರುದ್ಧದ ವಿನೂತನ ಪ್ರತಿಭಟನೆಯಾಗಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಇಲೆಕ್ಟ್ರಿಕ್ ಸ್ಕೂಟರ್‌ನ ಹಿಂಬದಿ ಸವಾರರಾಗಿ ರಾಜ್ಯ ಸೆಕ್ರೇಟರಿಯೇಟ್‌ಗೆ ನಬನ್ನಾದ ವರೆಗೆ ಸಂಚರಿಸಿದ್ದಾರೆ. ಬ್ಯಾಟರಿ ಚಾಲಿತ ಸ್ಕೂಟರ್ ಅನ್ನು ಸಹಾಯಕ ಸಚಿವ ಫಿರ್ಹಾದ್ ಹಕೀಮ್ ಚಲಾಯಿಸಿದರು. ಮಮತಾ ಬ್ಯಾನರ್ಜಿ ಅವರು ಹಿಂಬದಿ ಸವಾರರಾಗಿದ್ದರು.

ಹೆಲ್ಮೆಟ್ ಹಾಗೂ ಕುತ್ತಿಗೆಯಲ್ಲಿ ಪೆಟ್ರೋಲ್ ದರ ಏರಿಕೆಯ ವಿರುದ್ಧದ ಪ್ರದರ್ಶನಾ ಫಲಕ ಧರಿಸಿದ್ದ ಮಮತಾ ಬ್ಯಾನರ್ಜಿ ಅವರು ಹಝಾರೆ ಮೋರೆಯಿಂದ ರಾಜ್ಯ ಸೆಕ್ರೇಟರಿಯೇಟ್ ವರೆಗೆ 7 ಕಿ.ಮೀ. ಪ್ರಯಾಣಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಕೈ ಬೀಸಿದರು. 45 ನಿಮಿಷಗಳ ಕಾಲ ಸಂಚರಿಸಿ ನಿಬನ್ನಾಕ್ಕೆ ತಲುಪಿದ ಬಳಿಕ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ‘‘ನಾವು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಮೋದಿ ಸರಕಾರ ಹುಸಿ ಭರವಸೆಯನ್ನು ಮಾತ್ರ ನೀಡುತ್ತಿದೆ.

ಏರಿಕೆಯಾದ ಬೆಲೆಯನ್ನು ಇಳಿಸಲು ಅದು ಪ್ರಯತ್ನಿಸುತ್ತಿಲ್ಲ. ಮೋದಿ ಸರಕಾರ ಆಡಳಿತಕ್ಕೆ ಬಂದಾಗ ಹಾಗೂ ಈಗ ಪೆಟ್ರೋಲ್ ಬೆಲೆಯ ವ್ಯತ್ಯಾಸವನ್ನು ನೀವು ಗಮನಿಸಬಹುದು’’ ಎಂದು ಅವರು ಹೇಳಿದರು. ತೈಲ ಬೆಲೆ ಏರಿಕೆ ವಿರುದ್ಧ ತೃಣಮೂಲ ಕಾಂಗ್ರೆಸ್ ಶುಕ್ರವಾರದಿಂದ ಪ್ರತಿಭಟನೆ ಆರಂಭಿಸಲಿದೆ ಎಂದು ಅವರು ಹೇಳಿದರು. ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗುವುದು ಎಂದು ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿತ್ತು. ಆದರೆ, ಈಗ ಅದು ಎಲ್‌ಪಿಜಿಯ ಬೆಲೆ ಏರಿಕೆ ಮಾಡುತ್ತಿದೆ ಎಂದು ಬ್ಯಾನರ್ಜಿ ಹೇಳಿದರು. ಮೋದಿ ಹಾಗೂ ಶಾ ದೇಶವನ್ನು ಮಾರುತ್ತಿದ್ದಾರೆ. ಅವರು ಲಾಭದಾಯಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಮಾರುತ್ತಿದ್ದಾರೆ. ಈ ಸರಕಾರ ಮಹಿಳಾ ವಿರೋಧಿ, ಯುವ ವಿರೋಧಿ ಹಾಗೂ ರೈತ ವಿರೋಧಿ ಎಂದು ಮಮತಾ ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News