ಇಂಧನ ಬೆಲೆ ಏರಿಕೆ ಖಂಡಿಸಿ ಇಂದು ಭಾರತ್ ಬಂದ್: 8 ಕೋಟಿಗೂ ಅಧಿಕ ವ್ಯಾಪಾರಿಗಳಿಗೆ ರೈತರ ಬೆಂಬಲ

Update: 2021-02-26 07:31 GMT

ಹೊಸದಿಲ್ಲಿ: ತೈಲ ಬೆಲೆಯೇರಿಕೆಯನ್ನು ಖಂಡಿಸಿ ಮತ್ತು ಜಿಎಸ್‌ಟಿ ವ್ಯವಸ್ಥೆಯ ಮರುಪರಿಶೀಲನೆಗೆ ಆಗ್ರಹಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ)ದ ನೇತೃತ್ವದಲ್ಲಿ ಇಂದು ದೇಶಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಪ್ರತಿಭಟನೆಗೆ 40,000 ಸಂಘಟನೆಗಳ 8 ಕೋಟಿ ಗೂ ಅಧಿಕ ವ್ಯಾಪಾರಿಗಳು ತಮ್ಮ ಅಂಗಡಿ-ಮುಗ್ಗಟ್ಟು ಮುಚ್ಚಿ ಭಾರತ್ ಬಂದ್ ಗೆ ಕೈಜೋಡಿಸಿದ್ದಾರೆ.

ದಿಲ್ಲಿ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು,  ಶಾಂತಿಯುತವಾಗಿ ಮುಷ್ಕರದಲ್ಲಿ ಭಾಗವಹಿಸಿದೆ.

ಭಾರತ್ ಬಂದ್ ಗೆ ಪಶ್ಚಿಮಬಂಗಾಳ, ಮಧ್ಯಪ್ರದೇಶ, ಪಂಜಾಬ್, ಹರ್ಯಾಣ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಮುಚ್ಚಿವೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕರೆ ನೀಡಿರುವ ಬಂದ್ ಗೆ ಕರ್ನಾಟಕ ರಾಜ್ಯ ಲಾರಿ ಮಾಲಿಕರ ಸಂಘ  ಕೂಡ ಬೆಂಬಲ ನೀಡಿದೆ.

ಲಕ್ಷಾಂತರ ಲಾರಿಗಳು ರಸ್ತೆಗಳಲ್ಲೇ ಉಳಿಯುವ ಮೂಲಕ ಬಂದ್ ನಲ್ಲಿ ಭಾಗವಹಿಸಿವೆ. 1 ಕೋಟಿಗೂ ಅಧಿಕ ರಸ್ತೆ ಸಾರಿಗೆಯನ್ನು ಪ್ರತಿನಿಧಿಸುತ್ತಿರುವ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಸ್ಥೆ ಕೂಡ ಬಂದ್ ಗೆ ಬೆಂಬಲ ನೀಡಿದೆ.
 ಅವಶ್ಯಕ ವಸ್ತುಗಳಾದ ಔಷಧಿ, ಹಾಲು ಹಾಗೂತರಕಾರಿ ಅಂಗಡಿಗಳು ತೆರೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News