ಕೊರೋನಿಲ್ ವಿವಾದ: ಭಾರತೀಯ ವೈದ್ಯಕೀಯ ಸಂಘಕ್ಕೆ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ ಎಂದ ಪತಂಜಲಿ

Update: 2021-02-26 08:15 GMT

ಹೊಸದಿಲ್ಲಿ: ತನ್ನ ಕೊರೋನಿಲ್  ಉತ್ಪನ್ನ ಕುರಿತಂತೆ ಹಲವು ಪ್ರಶ್ನೆಗಳನ್ನೆತ್ತಿರುವ ಭಾರತೀಯ ವೈದ್ಯಕೀಯ ಸಂಘ(ಐಎಂಎ)ವನ್ನು ಪತಂಜಲಿ ಆಯುರ್ವೇದ ತರಾಟೆಗೆ ತೆಗೆದುಕೊಂಡಿದೆ. ಕೊರೋನವೈರಸ್ ಸೋಂಕಿಗೆ ಸಾಕ್ಷ್ಯ ಆಧರಿತ ಪ್ರಥಮ ಔಷಧಿ ಕೊರೋನಿಲ್ ಆಗಿದೆ ಎಂದು ಪತಂಜಲಿ ಹೇಳುತ್ತಿರುವುದನ್ನು ಐಎಂಎ ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಕುರಿತು ಪ್ರತಿಕ್ರಿಯಿಸಿದ ಪತಂಜಲಿ ವಕ್ತಾರ ಎಸ್ ಕೆ ತಿಜಾರವಾಲ, "ಐಎಂಎಗೆ ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ,'' ಎಂದು ಹೇಳಿದ್ದಾರೆ. "ರೋಗಿಗಳ ಲೂಟಿ ಹಾಗೂ ವೈದ್ಯಕೀಯ ವೃತ್ತಿಯಲ್ಲಿರುವ ಕಮಿಷನ್ ದಂಧೆಗೆ ಐಎಂಎ ಅಂತ್ಯ ಹಾಡುವುದು ಒಳ್ಳೆಯದು,'' ಎಂದು ಅವರು ಹೇಳಿದ್ದಾರೆ.

ಕೊರೋನಿಲ್ ನಂತಹ 'ಅವೈಜ್ಞಾನಿಕ ಉತ್ಪನ್ನ'ವನ್ನು ಕೇಂದ್ರ ಬೆಂಬಲಿಸುತ್ತಿರುವ ಬಗ್ಗೆಯೂ ಐಎಂಎ ಆಕ್ಷೇಪ ಸೂಚಿಸಿತ್ತು. ಕೊರೋನಿಲ್ ಕುರಿತ ಸಂಶೋಧನಾ ಲೇಖನ ಬಿಡುಗಡೆ ಸಮಾರಂಭದಲ್ಲಿ ಬಾಬಾ ರಾಮದೇವ್ ಜತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಇತ್ತೀಚೆಗೆ ಭಾಗವಹಿಸಿದ್ದು ಐಎಂಎ ಕೆಂಗಣ್ಣಿಗೆ ಗುರಿಯಾಗಿತ್ತು.

ಕೊರೋನಿಲ್ ಬಗ್ಗೆ ಐಎಂಎ ಅಭಿಪ್ರಾಯ ತನಗೆ ಆಘಾತ ತಂದಿದೆ, ಸೂಕ್ತ ಪ್ರಾಧಿಕಾರಗಳು ಅದನ್ನು  ಕೂಲಂಕಷವಾಗಿ ಪರಿಶೀಲಿಸಿವೆ ಹಾಗೂ ಸಿಒಪಿಪಿ ಲೈಸನ್ಸ್ ಕೂಡ ಲಭ್ಯವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ಲೈಸನ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿರಲಿಲ್ಲ, ಬದಲು ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಆಯುಷ್ ವಿಭಾಗ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News