ಪ.ಬಂಗಾಳ, ಪುದುಚೇರಿ,ಕೇರಳ, ತಮಿಳುನಾಡು, ಅಸ್ಸಾಂ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟ

Update: 2021-02-26 16:50 GMT

ಹೊಸದಿಲ್ಲಿ,ಫೆ.26: ಅಸ್ಸಾಂ,ಪಶ್ಚಿಮ ಬಂಗಾಳ,ತಮಿಳುನಾಡು,ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಶುಕ್ರವಾರ ಪ್ರಕಟಿಸಿದೆ. ಈ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿ ಮೇ ಮತ್ತು ಜೂನ್‌ನಲ್ಲಿ ಅಂತ್ಯಗೊಳ್ಳಲಿವೆ. ಆದರೆ ವಿ.ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರವು ವಿಶ್ವಾಸ ಮತವನ್ನು ಗೆಲ್ಲಲು ಇತ್ತೀಚಿಗೆ ವಿಫಲಗೊಂಡ ಬಳಿಕ ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ.

ಅಸ್ಸಾಮಿನಲ್ಲಿ ಮಾ.27,ಎ.1 ಮತ್ತು ಎ.6 ಹೀಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಕೇರಳ,ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಎ.6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾ.27,ಎ.1,6,10,17,22,26 ಮತ್ತು ಎ.29 ಹೀಗೆ ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ.

   ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮತಗಳ ಎಣಿಕೆಯು ಮೇ 2ರಂದು ನಡೆಯಲಿದೆ.ಇಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ನಿರ್ಗಮನಗೊಳ್ಳಲಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ ಅರೋರಾ ಅವರು,ಸಾಮಾಜಿಕ ಅಂತರ,ಮತದಾರರಿಗೆ ಮಾಸ್ಕ್‌ಗಳು,ಸ್ಯಾನಿಟೈಸರ್ ಮತ್ತು ಕೈಗವುಸುಗಳ ಲಭ್ಯತೆ ಸೇರಿದಂತೆ ಅಸ್ತಿತ್ವದಲ್ಲಿರುವ ಎಲ್ಲ ಕೋವಿಡ್-19 ಮಾರ್ಗಸೂಚಿಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಪಾಲಿಸಲಾಗುವುದು. ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು ಒಂದು ಸಾವಿರಕ್ಕೆ ಸೀಮಿತಗೊಳಿಸಲಾಗುವುದು. ಕೋವಿಡ್-19 ರೋಗಿಗಳು ಅಂಚೆ ಮತಪತ್ರದ ಮೂಲಕ ಅಥವಾ ಚುನಾವಣೆಯ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡುವ ಅವಕಾಶವನ್ನು ಮಂದುವರಿಸಲಾಗುವುದು ಎಂದರು.

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕವನ್ನೆದುರಿಸುತ್ತಿದ್ದ ಇಡೀ ವಿಶ್ವವು ಪ್ರಜೆಗಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆಯ ಜೊತೆ ಅವರ ಹಕ್ಕುಗಳನ್ನು ಸಮತೋಲನಗೊಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತಿತ್ತು. ದೊಡ್ಡ ಮಟ್ಟದಲ್ಲಿ ಚುನಾವಣೆಗಳನ್ನು ಹೇಗೆ ನಡೆಸುವುದು ಎನ್ನುವುದನ್ನು ಪರಿಶೀಲಿಸಲು ಆಯೋಗವು ಕಳೆದ ವರ್ಷದ ರಾಜ್ಯಸಭಾ ಚುನಾವಣೆಗಳು ಮತ್ತು ಬಿಹಾರ ಚುನಾವಣೆಗಳನ್ನು ಲಿಟ್ಮಸ್ ಪರೀಕ್ಷೆಯನ್ನಾಗಿ ಪರಿಗಣಿಸಿತ್ತು ಎಂದು ಅರೋರಾ ತಿಳಿಸಿದರು.

ಚುನಾವಣಾ ದಿನಾಂಕಗಳ ಪ್ರಕಟನೆಗೆ ಮುನ್ನ ಅರೋರಾ,ಚುನಾವಣಾ ಆಯುಕ್ತರಾದ ಸುಶೀಲಚಂದ್ರ ಮತ್ತು ರಾಜೀವ ಕುಮಾರ ಅವರನ್ನೊಳಗೊಂಡ ಚುನಾವಣಾ ಆಯೋಗವು ಎಲ್ಲ ಐದು ಪ್ರದೇಶಗಳಲ್ಲಿಯ ಪಾಲುದಾರರು ಮತ್ತು ಚುನಾವಣಾಧಿಕಾರಿಗಳೊಂದಿಗೆ ವ್ಯಾಪಕ ಸಭೆಗಳನ್ನು ನಡೆಸಿತ್ತು.

ಚುನಾವಣಾಧಿಕಾರಿಗಳು ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕೆಯನ್ನು ಪಡೆಯುವಂತಾಗಲು ಅವರನ್ನು ಮುಂಚೂಣಿ ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸುವಂತೆ ಆಯೋಗವು ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News