ಹಿಮಾಚಲ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಯುಂಟು ಮಾಡಿದ ಆರೋಪ: ಐವರು ಕಾಂಗ್ರೆಸ್ ಶಾಸಕರ ವಜಾ

Update: 2021-02-26 12:46 GMT
ಬಂಡಾರು ದತ್ತಾತ್ರೇಯ (Photo: Twitter/@Dattatreya)

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಿ ನಂತರ ಅವರನ್ನು ಅಡ್ಡಗಟ್ಟಿದ ಆರೋಪದ ಮೇಲೆ ಐದು ಮಂದಿ ಕಾಂಗ್ರೆಸ್ ಶಾಸಕರನ್ನು ವಜಾಗೊಳಿಸಲಾಗಿದೆ. ವಿಧಾನಸಭೆಯ ಈ ಅಧಿವೇಶನದ ಅಂತ್ಯದ ತನಕ ಈ ಐದು ಮಂದಿ ಕಲಾಪದಲ್ಲಿ ಭಾಗವಹಿಸುವಂತಿಲ್ಲ.

ವಿಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ, ಸುಂದರ್ ಸಿಂಗ್ ಠಾಕುರ್, ಹರ್ಷ್ ವರ್ಧನ್ ಚೌಹಾಣ್, ಸತ್ಪಾಲ್ ರೈಝಾದ ಹಾಗೂ ವಿನಯ್ ಕುಮಾರ್ ವಜಾಗೊಂಡ ಶಾಸಕರಾಗಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭಾರದ್ವಾಜ್ ಅವರು ಮಂಡಿಸಿದ ನೋಟಿಸ್ ಆಧಾರದಲ್ಲಿ ಈ ಐದು ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ಸ್ಪೀಕರ್ ವಿಪಿನ್ ಪರ್ಮಾರ್ ಹೇಳಿದ್ದಾರೆ. ಅವರು ವಜಾಗೊಳಿಸುವ ಆದೇಶ ಹೊರಡಿಸುವ ವೇಳೆ ಸದನದಲ್ಲಿ ಯಾವುದೇ ಕಾಂಗ್ರೆಸ್ ಸದಸ್ಯರು ಹಾಜರಿರಲಿಲ್ಲ.

ಇಂದು ಬೆಳಿಗ್ಗೆ 11 ಗಂಟೆಗೆ ಸದನದಲ್ಲಿ ರಾಜ್ಯಪಾಲರು ಭಾಷಣ ಮಾಡಲು ಎದ್ದು ನಿಂತಾಗ ಅಗ್ನಿಹೋತ್ರಿ ನೇತೃತ್ವದ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಿಂದ ಎದ್ದು ಘೋಷಣೆಗಳನ್ನು ಕೂಗಿದ್ದರು. ರಾಜ್ಯಪಾಲರು ತಮ್ಮ ಭಾಷಣದ ಕೊನೆಯ ವಾಕ್ಯ ಓದಿ ಇಡೀ ಭಾಷಣ ಓದಲಾಗಿದೆ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದ್ದರು.

ನಂತರ ಮುಖ್ಯಮಂತ್ರಿ ಜೈ ರಾಮ್ ಠಾಕುರ್ ಹಾಗೂ ಸ್ಪೀಕರ್ ಪರ್ಮಾರ್ ಜತೆಗೆ ರಾಜ್ಯಪಾಲರು ತಮ್ಮ ವಾಹನದತ್ತ ಸಾಗುತ್ತಿದ್ದಾಗ ವಿಪಕ್ಷ ಕಾಂಗ್ರೆಸ್ ಸದಸ್ಯರು ಅವರನ್ನು ತಡೆದಿದ್ದರೆಂದು ಆರೋಪಿಸಲಾಗಿದೆ.  ಕಾಂಗ್ರೆಸ್ ಸದಸ್ಯರ ವರ್ತನೆ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ರಾಜ್ಯಪಾಲರ ಭಾಷಣ ತುಂಬಾ ಸುಳ್ಳಿನ ಕಂತೆಯಿತ್ತು ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿಷಯಗಳು ಅವರ ಭಾಷಣದಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದೂ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News