ಚಳಿಗಾಲದ ನಂತರ ಇಂಧನ ಬೆಲೆ ಕಡಿಮೆಯಾಗಲಿದೆ ಎಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Update: 2021-02-26 14:28 GMT

ಹೊಸದಿಲ್ಲಿ,ಫೆ.26: ಕೆಲವು ರಾಜ್ಯಗಳಲ್ಲಿ ಪ್ರತಿ ಲೀ.ಗೆ ನೂರು ರೂ.ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಚಳಿಗಾಲ ಕಳೆದ ಬಳಿಕ ತುಸು ಕಡಿಮೆಯಾಗಲಿವೆ ಎಂದು ಪೆಟ್ರೋಲಿಯಂ,ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾಗಿರುವುದು ಇವುಗಳ ದರ ಏರಿಕೆಗೆ ಕಾರಣವಾಗಿದೆ ಎಂದು ಸಮಜಾಯಿಷಿಯನ್ನೂ ಅವರು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆಯು ಬಳಕೆದಾರರನ್ನು ಕಂಗೆಡಿಸಿದೆ. ಚಳಿಗಾಲ ಕಳೆದ ಬಳಿಕ ಬೆಲೆಗಳು ತುಸು ತಗ್ಗಲಿವೆ. ಇದೊಂದು ಜಾಗತಿಕ ವಿಷಯವಾಗಿದೆ,ಬೇಡಿಕೆಯಲ್ಲಿ ಏರಿಕೆಯಿಂದಾಗಿ ತೈಲ ಬೆಲೆಗಳೂ ಹೆಚ್ಚಿವೆ. ಚಳಿಗಾಲದಲ್ಲಿ ಇದು ನಡೆಯುತ್ತಲೇ ಇರುತ್ತದೆ. ಚಳಿಗಾಲ ಮುಗಿದ ಬಳಿಕ ಬೆಲೆಗಳು ಕೆಳಗಿಳಿಯುತ್ತವೆ ಎಂದರು.

ಇತ್ತೀಚಿನ ಕೆಲವು ವಾರಗಳಿಂದ ಗಗನಮುಖಿಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕಳೆದ ಮೂರು ದಿನಗಳಲ್ಲಿ ಯಾವುದೇ ಏರಿಕೆಯಾಗಿಲ್ಲ. ಶುಕ್ರವಾರ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅನುಕ್ರಮವಾಗಿ 90.93 ರೂ.ಮತ್ತು 81.32 ರೂ. ಹಾಗೂ ಮುಂಬೈನಲ್ಲಿ 97.34 ರೂ. ಮತ್ತು 88.34 ರೂ.ಆಗಿದ್ದವು. ಜನರಿಗೆ ಬೆಲೆಯೇರಿಕೆಯಿಂದ ಕೊಂಚ ನೆಮ್ಮದಿಯನ್ನೊದಗಿಸಲು ರಾಜಸ್ಥಾನ,ನಾಗಾಲ್ಯಾಂಡ್,ಪಶ್ಚಿಮ ಬಂಗಾಳ ಮತ್ತು ಅಸ್ಸಾಮನಂತಹ ರಾಜ್ಯಗಳು ಇಂಧನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News