ಚುನಾವಣಾ ದಿನಾಂಕ ಘೋಷಣೆಗೆ ಕೆಲವೇ ಗಂಟೆಗಳಿಗೆ ಮೊದಲು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ಪ. ಬಂಗಾಳ, ತಮಿಳುನಾಡು

Update: 2021-02-26 13:43 GMT

ಚೆನ್ನೈ: ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗಿಂತ ಕೆಲವೇ ಗಂಟೆಗಳಿಗೆ ಮುನ್ನ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಅಲ್ಲಿನ ಸರಕಾರಗಳು ಚುನಾವಣೆ ಮೇಲೆ ಕಣ್ಣಿಟ್ಟು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ.

ಪಶ್ಚಿಮ ಬಂಗಾಳದಲ್ಲಿ ನಗರ ಉದ್ಯೋಗ ಯೋಜನೆಯನ್ವಯ ದಿನಗೂಲಿ ಕಾರ್ಮಿಕರ ವೇತನ ಹೆಚ್ಚಿಸುವ ಕುರಿತು ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದರಲ್ಲದೆ ಈ ಯೋಜನೆಯಿಂದ 56,500 ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆಂದು ಹೇಳಿದ್ದಾರೆ.

ಅತ್ತ ತಮಿಳುನಾಡು ವಿಧಾನಸಭೆ ಇಂದಿನ ಅಧಿವೇಶನದಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ 10.5 ಮೀಸಲಾತಿ  ಘೋಷಿಸಿದೆ. ಇದಕ್ಕೂ ಮುನ್ನ ಇನ್ನೊಂದು ಜನಪ್ರಿಯ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಇ ಪಳನಿಸ್ವಾಮಿ, ಸಹಕಾರಿ ಬ್ಯಾಂಕ್‍ಗಳ ಮೂಲಕ ರೈತರು ಹಾಗೂ ಬಡವರು ಆರು ಸಾವರಿನ್ ತನಕದ  ಚಿನ್ನ ಅಡವಿಟ್ಟು  ಪಡೆದ ಚಿನ್ನದ ಸಾಲವನ್ನು ಮನ್ನಾಗೊಳಿಸುವುದಾಗಿ ಘೋಷಿಸಿದರು.

ರಾಜ್ಯದ 16 ಲಕ್ಷ ರೈತರಿಗೆ ನೀಡಲಾಗಿದ್ದ ರೂ. 12,000 ಕೋಟಿಗೂ ಅಧಿಕ ಸಾಲ ಮನ್ನಾವನ್ನು ಮುಖ್ಯಮಂತ್ರಿ ಈ ಹಿಂದೆ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News