ಬೇಕಾಬಿಟ್ಟಿ ಸಾಲ ನೀಡಿಕೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಾನಿಯನ್ನುಂಟು ಮಾಡಿದೆ:ಪ್ರಧಾನಿ ಮೋದಿ

Update: 2021-02-26 14:29 GMT

ಹೊಸದಿಲ್ಲಿ,ಫೆ.26: ಪ್ರತಿಪಕ್ಷಗಳು ತಮ್ಮ ಬೇಕಾಬಿಟ್ಟಿ ನೀತಿಗಳಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಾನಿಯನ್ನುಂಟು ಮಾಡಿವೆ ಎಂದು ಶುಕ್ರವಾರ ಇಲ್ಲಿ ದೂರಿದ ಪ್ರಧಾನಿ ನರೇಂದ್ರ ಮೋದಿ ಅವರು,‘ಅಪಾರದರ್ಶಕ ಸಾಲ ಸಂಸ್ಕೃತಿ ’ಯನ್ನು ದೇಶದಿಂದ ತೊಲಗಿಸಲು ತನ್ನ ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಹಣಕಾಸು ಸೇವೆಗಳನ್ನು ಸದೃಢಗೊಳಿಸಲು ಈ ವರ್ಷದ ಮುಂಗಡಪತ್ರದಲ್ಲಿ ಪ್ರಸ್ತಾವಿಸಲಾಗಿರುವ ಕ್ರಮಗಳ ಕುರಿತು ಚರ್ಚೆಗಾಗಿ ಆಯೋಜಿಸಲಾಗಿದ್ದ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಮೋದಿ,ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಲ್ಲಿ ಹಳೆಯ ವಿಧಾನಗಳು ಮತ್ತು ಹಳೆಯ ಪದ್ಧತಿಗಳನ್ನು ಬದಲಿಸಲಾಗುತ್ತಿದೆ. 10-12 ವರ್ಷಗಳ ಹಿಂದೆ ಉದಾರ ಸಾಲ ನೀಡಿಕೆಯ ಹೆಸರಿನಲ್ಲಿ ದೇಶದ ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಿಗೆ ಹೇಗೆ ಹಾನಿಯುಂಟಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತು ಎಂದರು.

 ಆರ್ಥಿಕತೆಗೆ ಸಂಬಂಧಿಸಿದಂತೆ ಸರಕಾರವು ಮೂರು ಆದ್ಯತೆಗಳನ್ನು ಹೊಂದಿದೆ. ಸಾಮಾನ್ಯ ಕುಟುಂಬಗಳ ಆದಾಯಗಳ ರಕ್ಷಣೆ,ಬಡವರಿಗೆ ಸರಕಾರದ ಲಾಭಗಳ ಪರಿಣಾಮಕಾರಿ ಮತ್ತು ಸೋರಿಕೆರಹಿತ ವಿತರಣೆ ಹಾಗೂ ದೇಶದ ಅಭಿವೃದ್ಧಿಗಾಗಿ ಮೂಲಸೌಕರ್ಯ ಸಂಬಂಧಿತ ಹೂಡಿಕೆಗಳಿಗೆ ಉತ್ತೇಜನ ಇವು ಈ ಮೂರು ಆದ್ಯತೆಗಳಾಗಿವೆ ಎಂದ ಅವರು,ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಹಕಾರಿ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ತನ್ನ ಸರಕಾರವು ನಂಬಿಕೆಯನ್ನು ಹೊಂದಿದೆ. ಸಾಧ್ಯವಿದ್ದ ಕಡೆಗಳಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಖಾಸಗಿ ಉದ್ಯಮಗಳನ್ನು ಉತ್ತೇಜಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ. ಆದರೆ ಇದರೊಂದಿಗೆ ಬ್ಯಾಂಕಿಂಗ್ ಮತ್ತು ವಿಮೆ ಉದ್ಯಮಗಳಲ್ಲಿ ಸಾರ್ವಜನಿಕ ಕ್ಷೇತ್ರದ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯು ಈಗಲೂ ದೇಶದ ಅಗತ್ಯವಾಗಿ ಉಳಿದುಕೊಂಡಿದೆ ಎಂದರು.

ಭಾರತವನ್ನು ಆತ್ಮನಿರ್ಭರ ದೇಶವನ್ನಾಗಿಸುವ ತನ್ನ ಕನಸನ್ನು ಹಂಚಿಕೊಂಡ ಮೋದಿ,ಆತ್ಮನಿರ್ಭರ ಭಾರತವು ಕೇವಲ ದೊಡ್ಡ ಕೈಗಾರಿಕೆಗಳು ಅಥವಾ ದೊಡ್ಡ ನಗರಗಳಿಂದ ನಿರ್ಮಾಣಗೊಳ್ಳುವುದಿಲ್ಲ. ಗ್ರಾಮಗಳ ಪ್ರಯತ್ನಗಳು,ಸಣ್ಣ ಪಟ್ಟಣಗಳಲ್ಲಿಯ ಸಣ್ಣ ಉದ್ಯಮಿಗಳು ಮತ್ತು ಸಾಮಾನ್ಯ ಭಾರತೀಯರ ಕಠಿಣ ಪರಿಶ್ರಮದಿಂದಾಗಿ ಆತ್ಮನಿರ್ಭರ ಭಾರತವು ಸೃಷ್ಟಿಯಾಗಲಿದೆ. ಆತ್ಮನಿರ್ಭರ ಭಾರತವು ರೈತರಿಂದ ಸೃಷ್ಟಿಯಾಗಲಿದೆ. ಆರ್ಥಿಕ ಸ್ವಾತಂತ್ರವನ್ನು ಸಾಧಿಸಲು ಭಾರತಕ್ಕೆ ನೆರವಾಗುವಲ್ಲಿ ಸ್ಟಾರ್ಟ್‌ಪ್‌ಗಳು ಮತ್ತು ಎಂಎಸ್‌ಎಂಇಗಳು ಕೂಡ ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದರು.

ಆಧಾರ್,ಜನಧನ ಯೋಜನೆ,ಮುದ್ರಾ ಸೇರಿದಂತೆ ತನ್ನ ಸರಕಾರದ ಇತರ ಕೆಲವು ನೀತಿಗಳು ಮತ್ತು ಉಪಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News