ಸಿಂಘು ಗಡಿಗೆ ತೆರಳಿ ರೈತರೊಂದಿಗೆ ಪ್ರತಿಭಟನೆ ನಡೆಸುವೆ: ಜೈಲಿನಿಂದ ಬಿಡುಗಡೆಯಾದ ನವದೀಪ್ ಕೌರ್ ಹೇಳಿಕೆ

Update: 2021-02-26 17:24 GMT

 ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ 23ರ ಹರೆಯದ ಸಾಮಾಜಿಕ ಹೋರಾಟಗಾರ್ತಿ  ನವದೀಪ್ ಕೌರ್ ಕೊನೆಗೂ ಇಂದು ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ NDTV ಯೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳುಗಳಿಂದ ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ದಿಲ್ಲಿ ಸಮೀಪದ ಸಿಂಘು ಗಡಿಗೆ ತೆರಳುವೆ. ರೈತರ ಪ್ರತಿಭಟನೆಗೆ ಕೈಜೋಡಿಸುವೆ ಎಂದು ಹೇಳಿದರು.

“ಮುಂದೇನು ಮಾಡಬೇಕೆಂಬ ಕುರಿತಾಗಿ ನನ್ನ ಕುಟುಂಬದೊಂದಿಗೆ ಚರ್ಚಿಸುವೆ. ನಾನು ಖಂಡಿತವಾಗಿಯೂ ಸಿಂಘು ಗಡಿಗೆ ತೆರಳಿ ರೈತರೊಂದಿಗೆ ಪ್ರತಿಭಟನೆ ನಡೆಸುವೆ. ನಾನು ಈ ಹಿಂದೆ ಏನೂ ಅಕ್ರಮ ಎಸಗಿಲ್ಲ. ಮುಂದೆಯೂ ಅಕ್ರಮ ಎಸಗಲಾರೆ. ರೈತರೊಂದಿಗೆ ಸದಾ ಕಾಲ ನಿಲ್ಲುವೆ’’ ಎಂದು ಕೌರ್ ಹೇಳಿದರು.

ತನ್ನೊಂದಿಗೆ ಬಂಧನಕ್ಕೊಳಗಾದ ಇನ್ನೋರ್ವ ದಲಿತ  ಹೋರಾಟಗಾರ ಶಿವ ಕುಮಾರ್ ಕುರಿತು ಮಾತನಾಡಿದ ಕೌರ್, ಶಿವಕುಮಾರ್ ಪರಿಸ್ಥಿತಿ ಕೆಟ್ಟದ್ದಾಗಿದೆ. ಅವರು 12ನೇ ತಾರೀಖಿನಂದು ಇರಲಿಲ್ಲ. ಆದಾಗ್ಯೂ ಅವರನ್ನು ಬಂಧಿಸಿ ಚೆನ್ನಾಗಿ ಥಳಿಸಲಾಗಿದೆ. ಆದೇಶಗಳ ಹೊರತಾಗಿಯೂ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿಲ್ಲ ಎಂದರು.

6 ವಾರಗಳ ಹಿಂದೆ ದಿಲ್ಲಿಯ ಹೊರವಲಯದಲ್ಲಿ ಕಾರ್ಮಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ ದಲಿತ ಕಾರ್ಮಿಕರ ಹೋರಾಟಗಾರ್ತಿ  ನವದೀಪ್ ಕೌರ್ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News