ನ್ಯಾಯಾಲಯದ ವಿಚಾರಣೆಗೆ ಲಿಂಕ್‌ ಗಳನ್ನು ಹಂಚಿಕೊಳ್ಳಲು ವಾಟ್ಸ್ಯಾಪ್‌ ಬಳಸುವುದಿಲ್ಲ: ಸುಪ್ರೀಂಕೋರ್ಟ್

Update: 2021-02-28 18:32 GMT

ಹೊಸದಿಲ್ಲಿ, ಫೆ. 28: ಸಾಮಾಜಿಕ ಜಾಲ ತಾಣ ಹಾಗೂ ಡಿಜಿಟಲ್ ಮೀಡಿಯಾಗಳನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ ಬೆನ್ನಲ್ಲೇ, ಇದೀಗ ಸುಪ್ರೀಂ ಕೋರ್ಟ್ ವೀಡಿಯೊ ಕಾನ್ಫರೆನ್ಸ್ ವಿಚಾರಣೆಗಳ ಲಿಂಕ್ ಅನ್ನು ವ್ಯಾಟ್ಸ್ ಆ್ಯಪ್ ಮೂಲಕ ಕಳುಹಿಸದೇ ಇರಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಶನಿವಾರ ಹೇಳಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಸುತ್ತೋಲೆ ಬಿಡುಗಡೆ ಮಾಡಿದ್ದು, ವ್ಯಾಟ್ಸ್ ಆ್ಯಪ್‌ಗಳಲ್ಲಿ ಲಿಂಕ್ ಹಂಚಿಕೊಳ್ಳುವ ಬದಲಾಗಿ, ಇನ್ನು ಮುಂದೆ ಪ್ರಕರಣದ ಬಗ್ಗೆ ವಾದಿಸುವ ವಕೀಲರು ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಹಾಗೂ ಈಮೇಲ್ ಮೂಲಕ ವೀಡಿಯೊ ಕಾನ್ಫರೆನ್ಸ್‌ನ ಲಿಂಕ್ ಕಳುಹಿಸಿ ಕೊಡಲಾಗುವುದು ಎಂದು ಹೇಳಿದೆ. ಭಾರತ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಜಾಲ ತಾಣಗಳ ಹೊಸ ನಿಯಮಗಳ ಪ್ರಕಾರ ವಾಟ್ಸ್ ಆ್ಯಪ್ ಗುಂಪು ರಚಿಸಿ ಅದರ ಮೂಲಕ ಲಿಂಕ್ ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದುದರಿಂದ ಇನ್ನು ಮುಂದೆ ವ್ಯಾಟ್ಸ್ ಆ್ಯಪ್ ಮೂಲಕ ಲಿಂಕ್ ಹಂಚಿಕೊಳ್ಳುವುದಿಲ್ಲ ಎಂದು ಅದು ಹೇಳಿದೆ.

ಮಾರ್ಚ್ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ವ್ಯಾಟ್ಸ್ ಆ್ಯಪ್‌ಗೆ ಬದಲಾಗಿ ಇನ್ನು ಮುಂದೆ ಪ್ರಕರಣದ ವಕೀಲರು ಅಥವಾ ಅರ್ಜಿದಾರರ ಈ ಮೇಲ್ ಐಡಿ ಅಥವಾ ಮೊಬೈಲ್ ನಂಬರ್‌ಗೆ ಸಂದೇಶದ ಮೂಲಕ ಲಿಂಕ್ ಹಂಚಿಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮ ಹಾಗೂ ಒಟಿಟಿ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಿ ಕೇಂದ್ರ ಸರಕಾರ ಗುರುವಾರ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News