ಕೊನೆಗೊಂಡ ರಾಮಮಂದಿರ ದೇಣಿಗೆ ಅಭಿಯಾನ: ನಿರ್ಮಾಣ ಮೊತ್ತಕ್ಕಿಂತ 1,000 ಕೋಟಿ ಹೆಚ್ಚು ಹಣ ಸಂಗ್ರಹ

Update: 2021-02-28 09:16 GMT

ಹೊಸದಿಲ್ಲಿ: 44 ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆಂದು ವಿಶ್ವ ಹಿಂದೂ ಪರಿಷತ್‌ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ಒಟ್ಟು ೨,೧೦೦ ಕೋಟಿ ರೂ. ಮೊತ್ತ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಸಂಜೆಯ ವೇಳೆಗೆ ಅಭಿಯಾನವನ್ನು ಕೊನೆಗೊಳಿಸಿದ್ದಾಗಿ ರಾಮ ಜನ್ಮಭೂಮಿ ಕ್ಷೇತ್ರದ ಟ್ರಸ್ಟಿ ಗೋವಿಂದ್‌ ದೇವ್‌ ಗಿರಿ ಹೇಳಿಕೆ ನೀಡಿದ್ದಾರೆ.

ಜನವರಿ 15 ರಂದು ಕ್ರೌಡ್‌ಫಂಡಿಂಗ್ ಅಭಿಯಾನವನ್ನು (ಜನರಿಂದ ಹಣ ಸಂಗ್ರಹಿಸುವ ಕಾರ್ಯ) ಪ್ರಾರಂಭಿಸುವ ಮೊದಲು, ಟ್ರಸ್ಟ್ ರಾಮ ಮಂದಿರ ಸಂಕೀರ್ಣವನ್ನು ನಿರ್ಮಿಸಲು 1,100 ಕೋಟಿ ರೂ. ಅಂದಾಜು ಮಾಡಿತ್ತು. ಆದರೆ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ಬಂದ ಕಾರಣದಿಂದದಾಗಿ ಅಂದಾಜು ಮೊತ್ತಕ್ಕಿಂತಲೂ ಒಂದು ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತಾದಂತೆ ಮಾತನಾಡಿದ ರಾಮ ಜನ್ಮಭೂಮಿ ಕ್ಷೇತ್ರದ ಟ್ರಸ್ಟಿ ಗೋವಿಂದ್‌ ದೇವ್‌ ಗಿರಿ, ಭಾರತ ದೇಶದ ದೂರ ಹಳ್ಳಿಯ ನಿವಾಸಿಗಳು, ಎಲ್ಲಾ ಜಾತಿ, ಧರ್ಮ, ವರ್ಗದ ಜನರು ಸೇರಿಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಎಲ್ಲರ ಉದಾರ ಕೊಡುಗೆಗಳನ್ನು ಸ್ವೀಕರಿಸುವುದರೊಂದಿಗೆ ಅಭಿಯಾನವು ಅಂತ್ಯಗೊಂಡಿದೆ. ಒಟ್ಟು ೨೧೦೦ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಮಂದಿರ ನಿರ್ಮಿಸಲು ೩೦೦-೪೦೦ ಕೋಟಿ ರೂ. ಅಂದಾಜಿನ ಪ್ರಕಾರ ಸಾಕಾಗುತ್ತದೆ. ಒಟ್ಟು ಸಂಕೀರ್ಣ ನಿರ್ಮಿಸಲು ೧೧೦೦ ಕೋಟಿ ರೂ. ಬಳಕೆಯಾಗಲಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News