ನಿಮ್ಮ ಆಂದೋಲನ ಶುದ್ಧವಾಗಿದೆ, ಸರಕಾರ ನಿಮ್ಮ ಮುಂದೆ ತಲೆ ಬಾಗಲೇಬೇಕು: ಮಹಾಪಂಚಾಯತ್‌ ನಲ್ಲಿ ಕೇಜ್ರಿವಾಲ್‌

Update: 2021-02-28 14:01 GMT
Photo: Twitter

ಮೀರತ್:‌ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ರೈತರ ಪ್ರತಿಭಟನೆಯ ಕುರಿತಾದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಪ್ರತಿರೂಪದಂತಿರುವ ಆದಿತ್ಯನಾಥ್‌ ಕನಿಷ್ಠ ಬೆಂಬಲ ಬೆಲೆಯ ಕುರಿತು ಹಗಲು ರಾತ್ರಿ ಸುಳ್ಳು ಹೇಳುತ್ತಿದ್ದಾರೆ. ರೈತರದ್ದು ಶುದ್ಧವಾದ ಆಂದೋಲನ, ನಿಮ್ಮ ಮುಂದೆ ಸರಕಾರವು ತಲೆ ಬಾಗಲೇಬೇಕು ಎಂದು ಕೇಜ್ರಿವಾಲ್‌ ಹೇಳಿಕೆ ನೀಡಿದ್ದಾರೆ. ಮೀರತ್‌ ನಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ ನಲ್ಲಿ ರೈತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕನಿಷ್ಠ ಬೆಂಬಲ ಬೆಲೆಯು ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಭಾಷಣದಲ್ಲಿ ತಿಳಿಸಿದ್ದರು. ಆದರೆ ಉತ್ತರಪ್ರದೇಶದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲಿ ಪಾವತಿಸಲಾಗಿದೆ? ಈ ತಿಂಗಳ ಆರಂಭದಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಪಿಎಂ ಮೋದಿ, "ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಇತ್ತು. ಎಂಎಸ್ಪಿ ಇದೆ. ಎಂಎಸ್ಪಿ ಭವಿಷ್ಯದಲ್ಲಿ ಉಳಿಯುತ್ತದೆ" ಎಂದು ಹೇಳಿದ್ದಾರೆ. ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರ ಆತಂಕಗಳನ್ನು ಅವರು ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದರು.

"ಅವರ ಸಚಿವರು ಎಂಎಸ್ಪಿ ಇತ್ತು, ಇರುತ್ತದೆ ಮತ್ತು ಉಳಿಯುತ್ತದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ರೈತರು ಯಾವುದೇ ಮಂಡಿಯಲ್ಲಿ ಎಂಎಸ್ಪಿ ಪಡೆದರೆ ನೀವು ಹೇಳಿ. ಆದಿತ್ಯನಾಥ್ ಹಗಲು ರಾತ್ರಿ ಸುಳ್ಳು ಹೇಳುತ್ತಾರೆ ಎಂದು ಅವರು ಇಂದು ಮೀರತ್‌ನಲ್ಲಿ ಹೇಳಿದರು.

ಇದು ರಾಷ್ಟ್ರೀಯ ಚಳುವಳಿ, ಶುದ್ಧ ಚಳುವಳಿ ಎಂದು ನಾನು ಕೊನೆಯಲ್ಲಿ ಹೇಳಲು ಬಯಸುತ್ತೇನೆ. ನಾನು ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ... ಸರ್ಕಾರವು ಅಂತಿಮವಾಗಿ ನಿಮ್ಮ ಮುಂದೆ ತಲೆಬಾಗಬೇಕು ಎಂದು ನಾನು ನಿಮಗೆ ಹೇಳುತ್ತೇನೆ" ಎಂದು ಕೇಜ್ರಿವಾಲ್‌ ಮಹಾಪಂಚಾಯತ್‌ ನಲ್ಲಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News