ಮತ್ತೆ ಅಡುಗೆ ಅನಿಲದ ದರದಲ್ಲಿ ಹೆಚ್ಚಳ: ಜನಸಾಮಾನ್ಯರಿಗೆ ಬರೆ

Update: 2021-03-01 16:53 GMT

ಹೊಸದಿಲ್ಲಿ,ಮಾ.1: ದೇಶದಲ್ಲಿ ‘ಅಚ್ಛೇ ದಿನ್’ ಬಂದಿವೆ! ಬೆಲೆಏರಿಕೆಯ ಬೆಂಕಿಯಲ್ಲಿ ಬೇಯುತ್ತಿರುವ ಶ್ರೀಸಾಮಾನ್ಯ ಸದ್ಯೋಭವಿಷ್ಯದಲ್ಲಿ ಊಟಕ್ಕೂ ತತ್ವಾರ ಪಡಬೇಕಾಗುತ್ತದೇನೋ? ತೈಲ ಮಾರಾಟ ಕಂಪನಿಗಳು ಅಡಿಗೆ ಅನಿಲದ ಸಿಲಿಂಡರ್‌ನ ಬೆಲೆಯನ್ನು ಸೋಮವಾರ ಮತ್ತೆ 25 ರೂ.ಹೆಚ್ಚಿಸಿವೆ. ಇದರೊಂದಿಗೆ ಈ ವರ್ಷ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಒಟ್ಟು 125 ರೂ.ಗಳ ಹೆಚ್ಚಳವಾಗಿದ್ದು,ಪ್ರತಿ ಸಿಲಿಂಡರ್ ಬೆಲೆ ಶೀಘ್ರವೇ 1,000 ರೂ.ತಲುಪಿದರೆ ಅಚ್ಚರಿ ಪಡಬೇಕಿಲ್ಲ.

ಮಂಗಳವಾರದಿಂದ ರಾಜಧಾನಿ ದಿಲ್ಲಿಯಲ್ಲಿ ಗೃಹಬಳಕೆ ಅನಿಲ ಬಳಕೆದಾರರು 14.2 ಕೆ.ಜಿ.ತೂಕದ ಪ್ರತಿ ಸಿಲಿಂಡರ್‌ಗೆ 819 ರೂ.ಗಳನ್ನು ಪಾವತಿಸಬೇಕಿದೆ.

‘ಅಚ್ಛೇ ದಿನ್’ಇಷ್ಟಕ್ಕೇ ಮುಗಿಯಲಿಲ್ಲ. 19 ಕೆ.ಜಿ.ಯ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್‌ನ ಬೆಲೆಯನ್ನೂ 95 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇನ್ನು ಮುಂದೆ ದಿಲ್ಲಿಯಲ್ಲಿ ಬಳಕೆದಾರರು ಪ್ರತಿ ಸಿಲಿಂಡರ್‌ಗೆ 1,614 ರೂ.ಗಳನ್ನು ನೀಡಬೇಕಾಗುತ್ತದೆ.

ಸಾಗಾಣಿಕೆ ವೆಚ್ಚ ಮತ್ತು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಇತರ ಸ್ಥಳಗಳಲ್ಲಿ ಈ ಬೆಲೆಗಳು ಹೆಚ್ಚುಕಡಿಮೆಯಾಗಲಿವೆ.

ತೈಲ ಮಾರಾಟ ಕಂಪನಿಗಳು ಕಳೆದ ವರ್ಷದ ಡಿಸೆಂಬರ್‌ನಲ್ಲೂ,ಅಂದರೆ ಎರಡು ತಿಂಗಳ ಹಿಂದೆ ಎಲ್‌ಪಿಜಿ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಿದ್ದವು.

ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಎರಡು ಮುಖ್ಯ ಘಟಕಗಳಾದ ಪ್ರೊಪೇನ್ ಮತ್ತು ಬುಟೇನ್‌ನ ಜಾಗತಿಕ ಬೆಲೆಗಳೊಂದಿಗೆ ಅಧಿಕೃತವಾಗಿ ತಳುಕು ಹಾಕಲಾಗಿದೆಯಾದರೂ ಭಾರತದಲ್ಲಿ ಇಂಧನಗಳ ಮೂಲವೆಚ್ಚಕ್ಕಿಂತ ಕೇಂದ್ರ ಮತ್ತು ರಾಜ್ಯ ತೆರಿಗೆಗಳೇ ಹೆಚ್ಚಾಗಿವೆ. ಸಿಗುತ್ತಿದ್ದ ಅಲ್ಪಸ್ವಲ್ಪ ಸಬ್ಸಿಡಿಯೂ ಎಂದೋ ಮಾಯವಾಗಿದೆ.

ಹೆಚ್ಚುತ್ತಿರುವ ಬೆಲೆಗಳಿಂದಾಗಿ ಈ ಅಗತ್ಯ ಇಂಧನಕ್ಕೆ ಬೇಡಿಕೆಯೂ ಕುಸಿದಿದೆ. ಮಾಸಿಕ ಆಧಾರದಲ್ಲಿ ಜನವರಿಯಲ್ಲಿ ಎಲ್‌ಪಿಜಿ ಬಳಕೆ ಶೇ.2ರಷ್ಟು ಕುಸಿತ ದಾಖಲಿಸಿದ್ದು,ಬೇಡಿಕೆ 2.492 ಮಿಲಿಯನ್ ಟನ್‌ಗಳಷ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News