ಹರ್ಷ ಮಂದರ್, ಇತರ ಸಾಮಾಜಿಕ ಹೋರಾಟಗಾರರ ವಿರುದ್ಧ 'ದ್ವೇಷ ರಾಜಕಾರಣ' ನಿಲ್ಲಿಸಿ; ಗಣ್ಯ ನಾಗರಿಕರಿಂದ ಜಂಟಿ ಹೇಳಿಕೆ

Update: 2021-03-01 08:33 GMT

ಹೊಸದಿಲ್ಲಿ: ಹರ್ಷ ಮಂದರ್ ಹಾಗೂ ಇತರ ಸಾಮಾಜಿಕ ಹೋರಾಟಗಾರರ ವಿರುದ್ಧದ 'ದ್ವೇಷದ ರಾಜಕಾರಣ' ಕೈಬಿಡಬೇಕೆಂದು ಆಗ್ರಹಿಸಿ ನಾಗರಿಕ ಸಮಾಜದ 650ಕ್ಕೂ ಹೆಚ್ಚು ಗಣ್ಯ ಸದಸ್ಯರು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಕೇಂದ್ರ ಸರಕಾರ ನಿಯಂತ್ರಣ ಸಂಸ್ಥೆಗಳನ್ನು ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಂತಹ ಕಾನೂನುಗಳನ್ನು ನಾಗರಿಕ ಸಂಘಟನೆಗಳಿಗೆ ಕಿರುಕುಳ ನೀಡುವ ಉದ್ದೇಶದೊಂದಿಗೆ ದುರುಪಯೋಗಪಡಿಸುತ್ತಿದೆ ಎಂದೂ ಹೇಳಿಕೆಯಲ್ಲಿ ಆರೋಪಿಸಲಾಗಿದೆ.

ಮಂದರ್ ಅವರ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ ದಕ್ಷಿಣ ದಿಲ್ಲಿಯಲ್ಲಿ ಸ್ಥಾಪಿಸಿರುವ ಎರಡು ಆಶ್ರಯ ತಾಣಗಳು ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪದ ಮೇಲೆ ಬಾಲ ನ್ಯಾಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮೇಲಿನ ಜಂಟಿ ಹೇಳಿಕೆ ಬಂದಿದೆ.

ಮಾಜಿ ಐಎಎಸ್ ಅಧಿಕಾರಿಯಾಗಿರುವ ಮಂದರ್ ಹಾಗೂ ಅವರ ಸಂಸ್ಥೆಯನ್ನು ಕೇಂದ್ರ ಸರಕಾರ ರಾಜಕೀಯ ದ್ವೇಷದ ಕ್ರಮವಾಗಿ ಟಾರ್ಗೆಟ್ ಮಾಡುತ್ತಿದೆ ಹಾಗೂ ಅಸಮ್ಮತಿ ಸೂಚಿಸುವವರನ್ನು ಇಂದಿನ ಭಾರತದಲ್ಲಿ ಹೇಗೆ ಕಾಣಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಂದರ್ ಅವರ ಎನ್‍ಜಿಒ ನಡೆಸುವ   ಆಶ್ರಯತಾಣಗಳಿಗೆ ಸಂಬಂಧಿಸಿದಂತೆ ಲೈಂಗಿಕ ದುರ್ನಡತೆ ಹಾಗೂ ಆರ್ಥಿಕ ಅಪರಾಧಗಳ  ಆರೋಪ ಹೊರಿಸಲಾಗಿರುವುದನ್ನೂ ಹೇಳಿಕೆಯಲ್ಲಿ ಖಂಡಿಸಲಾಗಿದೆ. ನಾಗರಿಕ ಸಮಾಜಕ್ಕೆ ಪ್ರಜಾಪ್ರಭುತ್ವಕ್ಕನುಗುಣವಾಗಿ ಕಾರ್ಯಾಚರಿಸಲು  ಅನುವು ಮಾಡಿ ಕೊಡಬೇಕು  ಹಾಗೂ ದೇಶ ನಿರ್ಮಾಣ ಕಾರ್ಯದಲ್ಲಿ ಅವರ ಪಾತ್ರಕ್ಕೆ ಮನ್ನಣೆ ದೊರೆಯಬೇಕೆಂದೂ ಹೇಳಿಕೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News