ಚಂದ್ರಶೇಖರ ಆಝಾದ್ ಸಾವಿಗೆ ನೆಹರೂ ಮಾಡಿದ್ದ ಸಂಚು ಕಾರಣ: ಬಿಜೆಪಿ ಮುಖಂಡ ಮದನ್ ದಿಲಾವರ್

Update: 2021-03-01 10:28 GMT

ಜೈಪುರ್: ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಸಾವಿಗೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಂಚು ಕಾರಣವಾಗಿತ್ತು ಎಂಬ ಆರೋಪವನ್ನು ರಾಜಸ್ಥಾನ ಬಿಜೆಪಿ ಶಾಸಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್ ಮಾಡಿದ್ದಾರೆ.

"ಆಜಾದ್ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದ ವೇಳೆ ಅವರಿಗೆ ಹಣಕಾಸಿನ ಅಗತ್ಯವಿತ್ತು. ಅದಕ್ಕೆ ಅವರು ನೆಹರು ಬಳಿ ತೆರಳಿದ್ದರು. ಅವರಿಗೆ ರೂ. 1200 ಬೇಕಿತ್ತು.  ಹಣದ ಏರ್ಪಾಟು ಮಾಡುವುದಾಗಿ ಹೇಳಿದ್ದ ನೆಹರು, ಪಾರ್ಕ್ ಒಂದರಲ್ಲಿ ಕಾಯುವಂತೆ ಆಜಾದ್ ಅವರಿಗೆ ಹೇಳಿದ್ದರು. ಆದರೆ ನಂತರ ನೆಹರು ಬ್ರಿಟಿಷ್ ಪೊಲೀಸರನ್ನು ಸಂಪರ್ಕಿಸಿ ನೀವು ಹುಡುಕುತ್ತಿರುವ ವ್ಯಕ್ತಿ, ಉಗ್ರ ಚಂದ್ರಶೇಖರ್ ಆಜಾದ್ ಪಾರ್ಕ್ ನಲ್ಲಿ ಕುಳಿತಿದ್ದಾರೆ ಎಂಬ ಮಾಹಿತಿ ನೀಡಿದ್ದರು" ಎಂದು ಉಪಚುನಾವಣೆ ನಡೆಯಲಿರುವ ರಾಜಸಮಂದ್ ಜಿಲ್ಲೆಯಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಬಿಜೆಪಿ ಶಾಸಕ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು "ಬ್ರಿಟಿಷ್ ಪೊಲೀಸರು ಪಾರ್ಕ್‍ಗೆ ಆಗಮಿಸಿ ಆಜಾದ್ ಅವರತ್ತ ಗುಂಡು ಹಾರಿಸಿದಾಗ ಅವರೂ ಪ್ರತಿ ಗುಂಡು ಹಾರಾಟ ನಡೆಸಿ ಕೆಲವರನ್ನು ಕೊಂದರು. ನಂತರ ತಮ್ಮನ್ನು ಸುತ್ತುವರಿಯಲಾಗಿದೆ ಎಂದು ತಿಳಿಯುತ್ತಲೇ ತಮ್ಮ ಬಂದೂಕಿನಲ್ಲಿ ಉಳಿದಿದ್ದ ಕೊನೆಯ ಗುಂಡನ್ನು ಬಳಸಿ ಅವರು ತಮಗೆ ತಾವೇ ಗುಂಡಿಕ್ಕಿಕೊಂಡರು" ಎಂದು ದಿಲಾವರ್ ಹೇಳಿದ್ದಾರೆ.

ಇಂದು ಕೂಡ ಮಾಧ್ಯಮದ ಜತೆ ಮಾತನಾಡಿದ  ಕೋಟಾ ಜಿಲ್ಲೆಯ ರಾಮಗಂಜ್ಮಂಡಿ ಶಾಸಕ ದಿಲಾವರ್, ಆಜಾದ್ ಸಾವಿಗೆ ನೆಹರು ಅವರೇ ಕಾರಣ ಎಂಬ ತಮ್ಮ ಹೇಳಿಕೆಗೆ ಅಂಟಿಕೊಂಡಿದ್ದಾರೆ. "ಆಜಾದ್ ಅವರ ಸಾವಿನ ನಿಜವಾದ ಆರೋಪಿ ಮುಂದೆ ದೇಶದ ಪ್ರಧಾನಿಯಾದ ಕಾಂಗ್ರೆಸ್ ನಾಯಕ. ನೆಹರೂ ಸಂಚು ಹೂಡಿ ಆಜಾದ್ ಅವರ ಸಾವಿಗೆ ಕಾರಣರಾದರು ಎಂದು ಬಹಿರಂಗವಾಗಿ ಹೇಳುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

ಪುಸ್ತಕಗಳು ಹಾಗೂ ಸ್ಥಳೀಯ ಮಾಧ್ಯಮದ ಮೂಲಕ ತಮಗೆ ಈ ಮಾಹಿತಿ ದೊರೆಯಿತು ಎಂದೂ ಅವರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಅವರ ಹೇಳಿಕೆಯನ್ನು ಖಂಡಿಸಿದೆಯಲ್ಲದೆ  ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಹಾಗೂ ಪ್ರಚಾರ ಗಿಟ್ಟಿಸಲು ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News