ಸಂತ್ರಸ್ತೆಯನ್ನು ವಿವಾಹವಾಗುತ್ತೀರಾ?: ಅತ್ಯಾಚಾರ ಆರೋಪಿಯನ್ನು ಪ್ರಶ್ನಿಸಿದ ಸುಪ್ರೀಂ‌ ಕೋರ್ಟ್

Update: 2021-03-01 11:43 GMT

ಹೊಸದಿಲ್ಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಸರಕಾರಿ ಉದ್ಯೋಗಿಯೊಬ್ಬ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ "ಅತ್ಯಾಚಾರ ಆರೋಪ ಹೊರಿಸಿದ ಮಹಿಳೆಯನ್ನು ಮದುವೆಯಾಗುತ್ತೀರಾ?" ಎಂದು ಸುಪ್ರೀಂ ಕೋರ್ಟ್ ಇಂದು ಪ್ರಶ್ನಿಸಿದೆ.

ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪೆನಿಯಲ್ಲಿ ಟೆಕ್ನಿಷಿಯನ್ ಆಗಿರುವ ಮೋಹಿತ್ ಸುಭಾಶ್ ಚವಾಣ್  ಎಂಬಾತನ ಮೇಲೆ ಶಾಲಾ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

"ನೀವು ಆಕೆಯನ್ನು ವಿವಾಹವಾಗಲು ಬಯಸಿದ್ದರೆ ನಾವು ಸಹಾಯ ಮಾಡಬಲ್ಲೆವು. ಇಲ್ಲದೇ ಇದ್ದರೆ ನೀವು ಕೆಲಸ ಕಳೆದುಕೊಂಡು ಜೈಲಿಗೆ ಹೋಗಬೇಕು. ನೀವು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಗೈದಿದ್ದೀರಿ" ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದರು.  ತಮ್ಮ ಕಕ್ಷಿಗಾರ ತಮ್ಮ ನೌಕರಿ ಕಳೆದುಕೊಳ್ಳಬಹುದು ಎಂದು ಆತನ ಪರ ವಕೀಲರು ಹೇಳಿದಾಗ ಮುಖ್ಯ ನ್ಯಾಯೂರ್ತಿ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಂತ್ರಸ್ತೆ ಪೊಲೀಸ್ ದೂರು ನೀಡಲು ತೆರಳಿದ್ದ ಸಂದರ್ಭ ಆಕೆಯನ್ನು ನಾನು ವಿವಾಹವಾಗಬಲ್ಲೆ ಎಂದು ತನ್ನ ತಾಯಿ ಹೇಳಿದ್ದರೂ ಆಕೆ ನಿರಾಕರಿಸಿದ್ದಳು ಎಂದು ಅಪೀಲುದಾರ ಹೇಳಿದ್ದಾರೆ. "ನಂತರ  ಆಕೆಗೆ 18 ವರ್ಷ ಪೂರೈಸಿದಾಗ ವಿವಾಹವಾಗುವ ಕುರಿತು ದಾಖಲೆ ಸಿದ್ಧಪಡಿಸಲಾಯಿತು ಆಗ ಆಕೆ ಒಪ್ಪಿದಾಗ ಆತ ವಿವಾಹವಾಗಲು ನಿರಾಕರಿಸಿದ್ದರಿಂದ ಅತ್ಯಾಚಾರ ದೂರು ದಾಖಲಿಸಲಾಗಿತ್ತು" ಎಂದು ಚವಾಣ್ ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.

"ಆಕೆಯನ್ನು ವಿವಾಹವಾಗಲು ನಾವು ನಿಮ್ಮನ್ನು ಬಲವಂತ ಪಡಿಸುವುದಿಲ್ಲ, ಆದರೆ ನಿಮಗಿಷ್ಟವಿದ್ದರೆ ನಮಗೆ ತಿಳಿಯಲಿ,  ಇಲ್ಲದೇ ಇದ್ದರೆ ನಾವು ನಿಮ್ಮನ್ನು ಬಲವಂತಪಡಿಸುತ್ತಿದ್ದೇವೆ ಎಂದು ನೀವು ಹೇಳಬಹುದು" ಎಂದು ಸಿಜೆಐ ಹೇಳಿದರು.

ಕಕ್ಷಿಗಾರರ ಜತೆ ಮಾತನಾಡಿ ಈ ಬಗ್ಗೆ ಉತ್ತರಿಸುವುದಾಗಿ ಆತನ ವಕೀಲರು ಹೇಳಿದರು. ನಂತರ  ಆರೋಪಿ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸಿ "ಆರಂಭದಲ್ಲಿ ಆಕೆಯನ್ನು ವಿವಾಹವಾಗಲು ಬಯಸಿದ್ದೆ. ಆದರೆ ಆಕೆ ನಿರಾಕರಿಸಿದ್ದಳು. ಈಗ ನನಗೆ ಅದಾಗಲೇ ವಿವಾಹವಾಗಿರುವುದರಿಂದ  ಸಾಧ್ಯವಿಲ್ಲ" ಎಂದಿದ್ದಾನೆ.

ಸುಪ್ರೀಂ ಕೋರ್ಟ್ ಆತನಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ವಿನಾಯಿತಿ ನೀಡಿದ್ದು ನಂತರ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ಬಂಧನದಿಂದ ವಿನಾಯಿತಿ ನೀಡಿದ್ದರೂ ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News