ತ.ನಾಡು ವಿಧಾನಸಭಾ ಚುನಾವಣೆ: 60 ಕ್ಷೇತ್ರಗಳಿಗೆ ಬೇಡಿಕೆ ಇಟ್ಟ ಬಿಜೆಪಿ, 21 ಕ್ಷೇತ್ರ ಕೊಡಬಹುದು ಎಂದ ಎಐಎಡಿಎಂಕೆ

Update: 2021-03-01 13:27 GMT

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟದಲ್ಲಿ ಬಿಜೆಪಿಯೊಂದಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಎಡಪಾಡ್ಡಿ ಕೆ.ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ರವಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿ ರಾತ್ರಿ 10 ಗಂಟೆಗೆ ಆರಂಭವಾದ ಚರ್ಚೆಯು ಮಧ್ಯರಾತ್ರಿಯ ತನಕವೂ ಮುಂದುವರಿದಿತ್ತು.

ಪಿಎಂಕೆ ಅತ್ಯಂತ ಹಿರಿಯ ಪಾಲುದಾರ ಪಕ್ಷವಾಗಿರುವ ಕಾರಣ ಬಿಜೆಪಿಗೆ 21 ಸೀಟುಗಳನ್ನು ಬಿಟ್ಟುಕೊಡಲು ಮಾತ್ರ ಸಾಧ್ಯ ಎಂದು ರಾಜ್ಯಾಧ್ಯಕ್ಷ ಮುರುಗನ್ ನೇತೃತ್ವದ ಬಿಜೆಪಿ ನಿಯೋಗಕ್ಕೆ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇಂದು ರಾತ್ರಿ ಬಿಜೆಪಿಯೊಂದಿಗಿನ ಮಾತುಕತೆ ಮುಗಿಯುವ ಸಾಧ್ಯತೆಯಿದೆ. ಎಐಎಡಿಎಂಕೆ ನಾಯಕತ್ವವು ಇತರ ಮೈತ್ರಿಪಕ್ಷಗಳೊಂದಿಗೆ ಇನ್ನೆರಡು ದಿನಗಳಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಬಹುದು ಎಂದು ಪಕ್ಷ ಮೂಲಗಳು ತಿಳಿಸಿವೆ.

ಎಐಎಡಿಎಂಕೆ ಶನಿವಾರ ಪಿಎಂಕೆಗೆ 23 ಸೀಟುಗಳ ಆಫರ್ ನೀಡಿತ್ತು.  ಎಐಎಡಿಎಂಕೆ 170ರಿಂದ 180 ಸೀಟುಗಳಲ್ಲಿ ಸ್ಪರ್ಧಿಸಲು ಬಯಸಿದೆ. ಸತತ ಮೂರನೇ ಬಾರಿ ಸ್ವಂತಶಕ್ತಿಯಲ್ಲಿ ಸರಕಾರ ರಚಿಸುವ ವಿಶ್ವಾಸದಲ್ಲಿದೆ.

ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಶಕ್ತಿ ಪಡೆದುಕೊಂಡಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಅದಕ್ಕೆ ಬೂತ್ ಮಟ್ಟದ ಏಜೆಂಟರೂ ಇಲ್ಲ ಎಂದು ಎಐಎಡಿಎಂಕೆ ನಾಯಕತ್ವ ತಿಳಿಸಿದೆ.

ತಳಮಟ್ಟದಲ್ಲಿ ಕೆಲಸ ಮಾಡುವಂತೆ ಅಮಿತ್ ಶಾ ವಿಲ್ಲುಪುರಂನಲ್ಲಿ ಪಕ್ಷದ ಕೋರ್ ಕಮಿಟಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News