ಜನ್ಮದಿನದಂದು ತನ್ನ ವಯಸ್ಸಿನ ಕುರಿತು ಮತ್ತೊಮ್ಮೆ ಗೊಂದಲ ಸೃಷ್ಟಿಸಿದ ಅಫ್ರಿದಿ

Update: 2021-03-01 15:17 GMT

ಲಾಹೋರ್:ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಾಮಾಜಿಕ ಮಾಧ್ಯಮದ ಮೂಲಕ ಜನ್ಮದಿನದಂದು ಶುಭಾಶಯ ಕೋರಿದ ಅಭಿಮಾನಿಗಳಿಗೆ ಇಂದು ಧನ್ಯವಾದ ಸಲ್ಲಿಸಿದರು. ಈ ವೇಳೆ ಅವರು ತನ್ನ ವಯಸ್ಸಿನ ಕುರಿತಂತೆ ಮತ್ತೊಮ್ಮೆ ಗೊಂದಲ ಸೃಷ್ಟಿಸಿದರು.

ಐಸಿಸಿಯ ಅಧಿಕೃತ ವೆಬ್ ಸೈಟ್ ಪ್ರಕಾರ ಅಫ್ರಿದಿ 1980ರ ಮಾರ್ಚ್ 1ರಂದು ಜನಿಸಿದ್ದಾರೆ. ಹೀಗಾಗಿ ಇಂದು ಅವರ ವಯಸ್ಸು 41. ಆದರೆ, ಸೋಮವಾರ ಟ್ವೀಟ್ ಮಾಡಿರುವ ಅಫ್ರಿದಿ ನನಗೆ ಇಂದು 44 ವರ್ಷವಾಗಿದೆ ಎಂದಿದ್ದಾರೆ.

ಈ ಕುರಿತಂತೆ ಟ್ವೀಟಿಸಿದ ಅಫ್ರಿದಿ,” ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಇಂದು ನನಗೆ 44 ವರ್ಷ! ನನ್ನ ಕುಟುಂಬ ಹಾಗೂ ಅಭಿಮಾನಿಗಳು ನನ್ನ ದೊಡ್ಡ ಆಸ್ತಿ. ಮುಲ್ತಾನ್ ತಂಡದೊಂದಿಗೆ ಆನಂದಿಸುತ್ತಿರುವೆ. ಎಲ್ಲ ಎಂಎಸ್ ಅಭಿಮಾನಿಗಳಿಗಾಗಿ ಪಂದ್ಯ ಗೆಲ್ಲುವ ಪ್ರದರ್ಶನ ನೀಡುವ ವಿಶ್ವಾಸವಿದೆ’’ಎಂದು ಟ್ವೀಟಿಸಿದ್ದರು.

ಅಫ್ರಿದಿ ತನ್ನ ಆತ್ಮಚರಿತ್ರೆ “ಗೇಮ್ ಚೇಂಜರ್’ನಲ್ಲಿ ತಾನು ಕ್ರಿಕೆಟಿಗೆ ಕಾಲಿಟ್ಟಿದ್ದಾಗ ತನಗೆ 19 ವರ್ಷವಾಗಿತ್ತು. 16 ವರ್ಷವಲ್ಲ. ನಾನು 1975ರಲ್ಲಿ ಜನಿಸಿದ್ದೇನೆ ಎಂದು ಬಹಿರಂಗಪಡಿಸಿದ್ದರು. 1975ರಲ್ಲಿ ಅಫ್ರಿದಿ ಜನಿಸಿದ್ದರೆ ಚೊಚ್ಚಲ ಪಂದ್ಯ ಆಡುವಾಗ ಅವರ ವಯಸ್ಸು 21 ಆಗಿರಬೇಕಾಗಿತ್ತು. ಹೀಗಾಗಿ ಆತ್ಮಚರಿತ್ರೆಯಲ್ಲೂ ತನ್ನ ಜನ್ಮದಿನದ ಕುರಿತು ಗೊಂದಲ ಸೃಷ್ಟಿಸಿದ್ದರು.

ಅಫ್ರಿದಿ 1996ರಲ್ಲಿ ನೈರೋಬಿಯಲ್ಲಿ ಶ್ರೀಲಂಕಾ ವಿರುದ್ದ ಚೊಚ್ಚಲ ಪಂದ್ಯ ಆಡಿದ್ದರು. ಏಕದಿನ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ 100 ರನ್ ಗಳಿಸಿ ದಾಖಲೆ ಪುಡಿಗಟ್ಟಿದ್ದರು.

ಆಲ್ ರೌಂಡರ್ ಅಫ್ರಿದಿ ಪಾಕ್ ಪರ 27 ಟೆಸ್ಟ್, 398 ಏಕದಿನ, 99 ಟಿ-20 ಪಂದ್ಯಗಳನ್ನಾಡಿದ್ದರು. 2009ರ ಟಿ-20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News