ಸರಕಾರದ ಮೌನ ರೈತರ ಪ್ರತಿಭಟನೆ ಹತ್ತಿಕ್ಕುವ ಕ್ರಮಗಳ ಕುರಿತು ಚಿಂತನೆ ನಡೆಸುತ್ತಿರುವ ಸೂಚನೆ: ಟಿಕಾಯತ್

Update: 2021-03-01 16:38 GMT

ಲಕ್ನೋ, ಮಾ.1: ಸರಕಾರ ಕೆಲವು ದಿನಗಳಿಂದ ಮೌನವಾಗಿರುವುದು ರೈತರ ಪ್ರತಿಭಟನೆ ವಿರುದ್ಧ ಕೆಲವು ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸುತ್ತಿರುವ ಸೂಚನೆಯಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೇಂದ್ರ ಸರಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆಗೆ ಸರಕಾರವೇ ಮುಂದಾಗಬೇಕು. ಬಿಕ್ಕಟ್ಟು ಪರಿಹಾರವಾಗದೆ ರೈತರು ಒಂದಡಿಯನ್ನೂ ಹಿಂದೆ ಇಡುವುದಿಲ್ಲ . ಕೃಷಿ ಕಾಯಕದ ಜೊತೆಗೆ ಪ್ರತಿಭಟನೆ ಮುಂದುವರಿಸಲು ರೈತರೂ ಸಿದ್ಧವಾಗಿದ್ದಾರೆ. ಸರಕಾರಕ್ಕೆ ಯಾವಾಗ ಸಮಯ ಸಿಗುತ್ತದೋ ಆಗ ಮಾತುಕತೆಯ ಪ್ರಸ್ತಾವದೊಂದಿಗೆ ಮುಂದೆ ಬರಲಿ ಎಂದು ಟಿಕಾಯತ್ ಹೇಳಿದ್ದಾರೆ. ದೇಶದ ವಿವಿಧೆಡೆ ಮಾರ್ಚ್ 24ರವರೆಗೆ ರೈತರ ಮಹಾಪಂಚಾಯತ್ ನಡೆಯಲಿದೆ. ಉತ್ತರಪ್ರದೇಶದಲ್ಲಿ ಗೋಧಿ ಬೆಳೆ ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟವಾಗದಿದ್ದರೆ ರೈತರು ತಮ್ಮ ಪ್ರತಿಭಟನೆ ತೀವ್ರಗೊಳಿಸಲಿದ್ದಾರೆ ಎಂದವರು ಹೇಳಿದ್ದಾರೆ.

ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿಯ ಸಂದರ್ಭ ನಡೆದ ಹಿಂಸಾಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ ಅದು ಸರಕಾರವೇ ಸೃಷ್ಟಿಸಿದ ಸಮಸ್ಯೆ ಎಂದು ಆರೋಪಿಸಿದರು. ವಿವಿಧೆಡೆ ರೈತರು ಕಟಾವಿಗೆ ಸಿದ್ಧರಾಗಿರುವ ಬೆಳೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಇಂತಹ ಕ್ರಮಗಳಿಗೆ ಇನ್ನೂ ಕಾಲ ಬಂದಿಲ್ಲ. ಆದರೆ ಇಂತಹ ಕ್ರಮ ಕೈಗೊಳ್ಳಬೇಡಿ ಎಂದು ಸರಕಾರ ಯಾಕೆ ರೈತರನ್ನು ವಿನಂತಿಸುತ್ತಿಲ್ಲ ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News