ಮೃತ ಮಹಿಳೆಯ ಮಾನಹಾನಿ ಪ್ರಕರಣ : ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಪ್ರಕರಣ ದಾಖಲು

Update: 2021-03-02 03:48 GMT
ದೇವೇಂದ್ರ ಫಡ್ನವೀಸ್ (Photo - PTI)

ನಾಗ್ಪುರ : ಮಹಾರಾಷ್ಟ್ರ ಸಚಿವರ ರಾಜೀನಾಮೆಗೆ ಕಾರಣವಾದ ಸಾವಿನ ಪ್ರಕರಣ ಸಂಬಂಧ ಮೃತ ಮಹಿಳೆಯ ಮಾನಹಾನಿ ಆರೋಪದಲ್ಲಿ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪುಣೆ ಜಿಲ್ಲೆಯ ಮಹಿಳೆಯ ಮಾನನಷ್ಟ ಮಾಡಿದ ಆರೋಪದಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 500 ಮತ್ತು 501ರ ಅನ್ವಯ ಮನೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಡ್ನವೀಸ್ ಜತೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಪ್ರವೀಣ್ ದಾರೇಕರ್, ಮಾಜಿ ಸಚಿವರಾದ ಸುಧೀರ್ ಮುಗಂಟಿವಾರ್, ಆಶೀಶ್ ಶೇಲರ್, ಮುಂಬೈ ಶಾಸಕ ಅತುಲ್ ಭಟ್ಕಳ್‌ಕರ್ ಹಾಗೂ ಬಿಜೆಪಿ ನಾಯಕಿ ಚಿತ್ರಾ ವಾಘ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಪ್ರಸಾದ್ ಲಾಡ್, ಶಾಂತಾಬಾಯಿ ಚವ್ಹಾಣ್ ಮತ್ತು ಮಹಿಳಾ ಹೋರಾಟಗಾರ್ತಿ ತೃಪ್ತಿದೇಸಾಯಿ ಅವರನ್ನೂ ಹೆಸರಿಸಲಾಗಿದೆ.
ಪುಣೆಯ ಹಡಪಸಾರ್ ಎಂಬಲ್ಲಿ 23 ವರ್ಷ ಮಹಿಳೆ ಇತ್ತೀಚೆಗೆ ಮೃತಪಟ್ಟಿದ್ದರು. ಮಹಿಳೆಯ ಸಾವಿನ ಹಿಂದೆ ಶಿವಸೇನೆ ಶಾಸಕ ಸಂಜಯ್ ರಾಥೋಡ್ ಅವರ ಕೈವಾಡವಿದೆ ಎಂದು ಬಿಜೆಪಿ ಆಪಾದಿಸಿದ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿತ್ತು. ಬಂಜಾರ ಸಮುದಾಯಕ್ಕೆ ಸೇರಿದ ರಾಥೋಡ್, ರಾಜ್ಯದ ಅರಣ್ಯ ಸಚಿವ ಹುದ್ದೆಗೆ ರವಿವಾರ ರಾಜೀನಾಮೆ ನೀಡಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.

ರಾಷ್ಟ್ರೀಯ ಬಂಜಾರ ಪರಿಷತ್‌ನ ಯುವ ಘಟಕದ ಅಧ್ಯಕ್ಷ ಶ್ಯಾಮ್‌ಸುಂದರ್ ರಾಥೋಡ್ ಎಂಬವರು ವಾಶಿಂ ಜಿಲ್ಲೆಯಲ್ಲಿ ದೂರು ನೀಡಿದ್ದಾರೆ. ಕೆಲ ಸುದ್ದಿವಾಹಿನಿಗಳು ಕೂಡಾ ಮೃತ ಮಹಿಳೆ ಮತ್ತು ಬಂಜಾರ ಸಮುದಾಯವನ್ನು ಅವಮಾನಿಸಿವೆ ಎಂದು ದೂರಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News