ಜೈಲು ಹೈಟೆಕ್ ಮಾಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಕೈದಿ !

Update: 2021-03-02 04:03 GMT
ಸಾಂದರ್ಭಿಕ ಚಿತ್ರ

ಗುರುಗಾಂವ್ : ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ 13 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಟೆಕ್ಕಿಯೊಬ್ಬರು, ಭಾರತೀಯ ಜೈಲುಗಳನ್ನು ಹೈಟೆಕ್ ಮಾಡುವ ಉದ್ದೇಶದಿಂದ ಜೈಲಿನಲ್ಲಿದ್ದುಕೊಂಡೇ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾರೆ.

ಹರ್ಯಾಣದ ಗುರುಗಾಂವ್‌ನ ಅಮಿತ್ ಮಿಶ್ರಾ, ವಿಶಿಷ್ಟ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಕೈದಿ. ಪ್ರಕರಣದಲ್ಲಿ ದೋಷಮುಕ್ತನಾಗಿ ಭಂದೋಸಿ ಜೈಲಿನಿಂದ ಇದೀಗ ಹೊರಬಂದಿರುವ ಮಿಶ್ರಾಗೆ ಇದೀಗ ಜೈಲು ಅಧಿಕಾರಿಗಳಿಂದ ಭಾರೀ ಬೇಡಿಕೆ. ಮಿಶ್ರಾ ಅಭಿವೃದ್ಧಿಪಡಿಸಿದ ಫಿನೀಕ್ಸ್ ಎಂಬ ಜೈಲು ನಿರ್ವಹಣೆ ವ್ಯವಸ್ಥೆಯ ಸಾಫ್ಟ್‌ವೇರ್ ಭಾರೀ ಪ್ರಯೋಜನಕಾರಿಯಾಗಿರುವುದು ಇದಕ್ಕೆ ಕಾರಣ.

ಮಿಶ್ರಾ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ಗೆ ಸುಪ್ರೀಂಕೋರ್ಟ್ ಕೂಡಾ ಸೋಮವಾರ ಮಾನ್ಯತೆ ನೀಡಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು 14 ವರ್ಷ ಜೈಲುವಾಸ ಅನುಭವಿಸಿದ ಬಳಿಕ ಶೀಘ್ರ ಜೈಲಿನಿಂದ ಬಿಡುಗಡೆಯಾಗುವ ತಮ್ಮ ಕಾನೂನಾತ್ಮಕ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಅವರ ನೆರವು ಕೋರಿದೆ.

ಕೈದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಸಮಾನ ಫ್ಲಾಟ್ ಫಾರಂನಲ್ಲಿ ಸಂಗ್ರಹಿಸಿ ಸೂಕ್ತ ಕ್ರಮಕ್ಕಾಗಿ ಬಳಸಿಕೊಳ್ಳಲು ಮಿಶ್ರಾ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನ ಕಾರ್ಯಸಾಧ್ಯತೆಯನ್ನು ರಾಜ್ಯಗಳು ಪರಿಶೀಲಿಸುವಂತೆಯೂ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಆದೇಶಿಸಿದೆ.

ಮಿಶ್ರಾ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನಲ್ಲಿ ಕೈದಿಗಳ ವಿಳಾಸ, ಜೈಲಿನಲ್ಲಿ ಇರುವ ಅವಧಿ, ಉಳಿಕೆ ಶಿಕ್ಷಾವಧಿ ಮತ್ತಿತರ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಇಡಬಹುದಾಗಿದ್ದು, ಜೈಲು ಅಧಿಕಾರಿಗಳಿಗೆ ಇದು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಇದೆ ಎಂದು ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್ ಸುಪ್ರೀಂ ಗಮನಕ್ಕೆ ತಂದಿದ್ದರು.

"ನ್ಯಾಯವ್ಯವಸ್ಥೆಗೆ ನೆರವು ನೀಡಲು ಅನುವಾಗಿರುವುದು ವಿಶೇಷ ಅನುಭವ. ನಾನು ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಈಗ ಹರ್ಯಾಣದ 19 ಜೈಲಿಗಳಲ್ಲಿ, ರಾಜಸ್ಥಾನದ 38, ಉತ್ತರ ಪ್ರದೇಶದ 31 ಹಾಗೂ ಹಿಮಾಚಲ ಪ್ರದೇಶದ 13 ಜೈಲುಗಳಲ್ಲಿ ಬಳಕೆಯಲ್ಲಿದೆ. ಈ ಸಾಫ್ಟ್‌ವೇರ್ ಬಳಕೆ ಕೈದಿಗಳಿಗೆ ನ್ಯಾಯ ಒದಗಿಸಲು ಮತ್ತು ಜೈಲು ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಲು ನೆರವಾಗಲಿದೆ" ಎಂದು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News