"ಪ್ರಧಾನಿಯ ಗುಣಗಾನ ಮಾಡಿ ಸಮಯ ಪೋಲು ಮಾಡುವುದನ್ನು ನಿಲ್ಲಿಸಿ"

Update: 2021-03-02 11:18 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‍ಎಫ್) ಜತೆ  ಹೊಂದಾಣಿಕೆ ಮಾಡಿಕೊಂಡಿರುವುದರನ್ನು ಪ್ರಶ್ನಿಸಿ ಪಕ್ಷದ ಹಿರಿಯ ನಾಯಕ ಆನಂದ್ ಶರ್ಮ ಸೋಮವಾರ ನೀಡಿದ ಹೇಳಿಕೆಗೆ ಇನ್ನೊಬ್ಬ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಇಂದು ಸರಣಿ ಟ್ವೀಟ್‍ಗಳ ಮೂಲಕ ತಿರುಗೇಟು ನೀಡಿದ್ದಾರೆ. "ವಾಸ್ತವಗಳನ್ನು ತಿಳಿದುಕೊಳ್ಳಿ ಆನಂದ್ ಶರ್ಮ" ಎಂಬ ಶೀರ್ಷಿಕೆಯನ್ನೂ ತಮ್ಮ ಟ್ವೀಟ್‍ಗಳಿಗೆ ಚೌಧುರಿ ನೀಡಿದ್ದಾರೆ. ಕಳೆದ ವರ್ಷ ಪಕ್ಷದ ನಾಯಕತ್ವ ಶೈಲಿಯನ್ನು ಪ್ರಶ್ನಿಸಿ ವರಿಷ್ಠರಿಗೆ ಪತ್ರ ಬರೆದಿದ್ದ 23 ಪ್ರಮುಖರಲ್ಲಿ ಆನಂದ್ ಶರ್ಮ ಕೂಡ ಒಬ್ಬರಾಗಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

"ಪ್ರಧಾನಿಯ ಗುಣಗಾನ ಮಾಡಿ  ಸಮಯ ಪೋಲು ಮಾಡುವುದನ್ನು ನಿಲ್ಲಿಸುವಂತೆ ಒಂದು ಆಯ್ದ ಗುಂಪಿನ ಕಾಂಗ್ರೆಸ್ ಪ್ರಮುಖರಿಗೆ  ಆಗ್ರಹಿಸುತ್ತೇನೆ. ಪಕ್ಷವನ್ನು ಬಲಪಡಿಸುವ  ಕರ್ತವ್ಯ ಅವರಿಗಿದೆ ಹಾಗೂ ತಮ್ಮನ್ನು ಬೆಳೆಸಿದ ಮರವನ್ನು ಅವರು ಗೌಣವಾಗಿಸಬಾರದು" ಎಂದು ಬಂಗಾಳ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಚೌಧುರಿ ಟ್ವೀಟ್ ಮಾಡಿದ್ದಾರೆ.

ಐಎಸ್‍ಎಫ್ ಕುರಿತಂತೆ ತಮ್ಮ ಇನ್ನೊಂದು ಟ್ವೀಟ್‍ನಲ್ಲಿ ಉಲ್ಲೇಖಿಸಿದ  ಚೌಧುರಿ, "@ಐಎನ್‍ಸಿಇಂಡಿಯಾಗೆ ತನ್ನ ಪಾಲಿನ ಎಲ್ಲಾ ಸೀಟುಗಳು ದೊರಕಿವೆ. ಎಡರಂಗವು ತನ್ನ ಸೀಟುಗಳಿಂದ ಕೆಲವನ್ನು ಐಎಸ್‍ಎಫ್‍ಗೆ ನೀಡುತ್ತಿದೆ. ಸಿಪಿಎಂ ನೇತೃತ್ವದ ಈ ಕೂಟವನ್ನು 'ಕೋಮುವಾದಿ' ಎಂದು ನೀವು ಕರೆದಿರುವುದು ಬಿಜೆಪಿಯ ಧ್ರುವೀಕರಣ ಅಜೆಂಡಾಗೆ ಸಹಕಾರಿಯಾಗುತ್ತದೆ" ಎಂದು  ಬರೆದಿದ್ದಾರೆ.

"ಬಿಜೆಪಿಯ ವಿಷಕಾರಿ ಕೋಮುವಾದದ ವಿರುದ್ಧ ಹೋರಾಡುವ ಬದ್ಧತೆಯಿರುವವರು ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಸಹಾಯ ಮಾಡಬೇಕು" ಎಂದೂ ಚೌಧುರಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕರ ನಡುವಿನ ಈ ವಾಗ್ಯುದ್ಧಕ್ಕೆ ಬಿಜೆಪಿ ಕೂಡ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದೆ. "ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಲೋಕಸಭೆಯಲ್ಲಿ ಸದನ ನಾಯಕರಾಗಿ ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದೂ ಅವರು  ಅವಮಾನವನ್ನು ಸಹಿಸಿಕೊಂಡು ಮತೀಯ ಶಕ್ತಿಗಳನ್ನು ಸಮರ್ಥಿಸಬೇಕಿದೆ. ಎಂತಹ ದಯನೀಯ ಸ್ಥಿತಿ" ಎಂದು ಪಕ್ಷ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News