ಕೋವಿಡ್ ಸಾಂಕ್ರಾಮಿಕದ ವರ್ಷದಲ್ಲಿ ಭಾರತದ ಬಿಲಿಯಾಧಿಪತಿಗಳ ಪಟ್ಟಿಗೆ ಸೇರ್ಪಡೆಗೊಂಡ 40 ಮಂದಿ

Update: 2021-03-02 10:09 GMT

ಮುಂಬೈ: ಕಳೆದ ವರ್ಷ ದೇಶ ಕೋವಿಡ್ ಸಾಂಕ್ರಾಮಿಕದಿಂದ ನಲುಗಿದ್ದ ಸಂದರ್ಭ 40 ಭಾರತೀಯರು ಬಿಲಿಯಾಧಿಪತಿಗಳ ಪಟ್ಟಿಗೆ ಸೇರ್ಪಡೆಗೊಂಡು ಈ ಪಟ್ಟಿಯಲ್ಲಿರುವವರ ಸಂಖ್ಯೆಯನ್ನು 177ಕ್ಕೆ ಏರಿಸಿದ್ದಾರೆಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ತಿಳಿಸಿದೆ. ಮುಕೇಶ್ ಅಂಬಾನಿ ಅವರು  83 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅತ್ಯಂತ ಶ್ರೀಮಂತ ಭಾರತೀಯನೆಂಬ ತಮ್ಮ ಪಟ್ಟ ಉಳಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಕಳೆದ ವರ್ಷ ಶೇ 24ರಷ್ಟು ಏರಿಕೆಯಾಗಿದ್ದು ಅವರು ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನ ಪಡೆದಿದ್ದಾರೆಂದು ವರದಿ ತಿಳಿಸಿದೆ.

ಇನ್ನೊಬ್ಬ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನ ಮೌಲ್ಯ ಕಳೆದ ವರ್ಷ ಬಹುತೇಕ ದ್ವಿಗುಣಗೊಂಡು 32 ಬಿಲಿಯನ್ ಡಾಲರ್ ತಲುಪಿದೆ. ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಇವರ ಹೆಸರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 20 ಸ್ಥಾನಗಳಷ್ಟು ಮೇಲಕ್ಕೆ ಏರಿಕೆಯಾಗಿ ಅವರೀಗ ಜಗತ್ತಿನ 48ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಗೌತಮ್ ಅದಾನಿಯ ಸೋದರ ವಿನೋದ್ ಸಂಪತ್ತಿನ ಮೌಲ್ಯ ಶೇ 128ರಷ್ಟು ಏರಿಕೆಯಾಗಿ 9.8 ಬಿಲಿಯನ್ ಡಾಲರ್ ತಲುಪಿದೆ.

ಖ್ಯಾತ ಐಟಿ ಕಂಪೆನಿ ಎಚ್‍ಸಿಎಲ್‍ನ ಶಿವ್ ನಾಡರ್ ಅವರು ಮೂರನೇ ಅತ್ಯಂತ ಶ್ರೀಮಂತ ಭಾರತೀಯನಾಗಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ 27 ಬಿಲಿಯನ್ ಡಾಲರ್ ಆಗಿದೆ. ಸಾಫ್ಟ್ ವೇರ್ ಕಂಪೆನಿ ಝೇಲರ್‍ನ ಜಯ್ ಚೌಧುರಿ ಅವರ ಸಂಪತ್ತು ಶೇ 274ರಷ್ಟು ಏರಿಕೆಯಾಗಿ 13 ಬಿಲಿಯನ್ ಡಾಲರ್ ತಲುಪಿದ್ದರೆ, ಬೈಜು ರವೀಂದ್ರನ್ ಮತ್ತವರ ಕುಟುಂಬದ ಸಂಪತ್ತು ಶೇ 100ರಷ್ಟು ಏರಿಕೆ ಕಂಡು 2.8 ಬಿಲಿಯನ್ ಡಾಲರ್ ತಲುಪಿದೆ ಎಂದು ವರದಿ ಹೇಳಿದೆ.

ಮಹೀಂದ್ರ ಗ್ರೂಪ್‍ನ ಆನಂದ್ ಮಹೀಂದ್ರ ಮತ್ತವರ ಕುಟುಂಬದ ಸಂಪತ್ತು ಕೂಡ ಶೇ 100ರಷ್ಟು ಏರಿಕೆಯಾಗಿ 2.4 ಬಿಲಿಯನ್ ಡಾಲರ್ ತಲುಪಿದೆ. ಈ ನಡುವೆ ಪತಂಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರ ಸಂಪತ್ತು ಶೇ 32ರಷ್ಟು ಕುಸಿತ ಕಂಡು 3.6 ಬಿಲಿಯನ್ ಡಾಲರ್ ತಲುಪಿದೆ.

ದೇಶದ 177 ಬಿಲಿಯಾಧಿಪತಿಗಳ ಪೈಕಿ 60 ಮಂದಿ ಮುಂಬೈನವರಾದರೆ,  40 ಮಂದಿ ದಿಲ್ಲಿ ಹಾಗೂ 22 ಮಂದಿ ಬೆಂಗಳೂರಿನವರಾಗಿದ್ದಾರೆ.

ಮಹಿಳಾ ಬಿಲಿಯಾಧಿಪತಿಗಳ ಪೈಕಿ ಬಯೋಕಾನ್ ಸಂಸ್ಥೆಯ ಕಿರಣ್ ಮಜೂಂದಾರ್ ಶಾ ಅವರ ಒಟ್ಟು ಸಂಪತ್ತು ಶೇ 41ರಷ್ಟು ಏರಿಕೆಯಾಗಿ 4.8 ಬಿಲಿಯನ್ ಡಾಲರ್ ಆಗಿದ್ದರೆ, ಗೋದ್ರೇಜ್ ಸಂಸ್ಥೆಯ ಸ್ಮಿತಾ ವಿ ಸೃಷ್ಣ ಅವರ ಸಂಪತ್ತು  4.7 ಬಿಲಿಯನ್ ಡಾಲರ್ ಹಾಗೂ ಲುಪಿನ್ ಸಂಸ್ಥೆಯ ಮಂಜು ಗುಪ್ತಾ ಅವರ ಸಂಪತ್ತು 3.3 ಬಿಲಿಯನ್ ಡಾಲರ್ ಆಗಿದೆ.

ಜಾಗತಿಕ ಶ್ರೀಮಂತರ ಪೈಕಿ ಟೆಸ್ಲಾ ಸಂಸ್ಥೆಯ ಇಲೋನ್ ಮಸ್ಕ್ ಪ್ರಥಮ ಸ್ಥಾನದಲ್ಲಿದ್ದರೆ ಅಮೆಝಾನ್‍ನ ಜೆಫ್ ಬೆಝೋಸ್ ಎರಡನೇ ಸ್ಥಾನದಲ್ಲಿ ಹಾಗೂ ಫ್ರಾನ್ಸ್ ದೇಶದ ಬರ್ನಾರ್ಡ್ ಅರ್ನೋಲ್ಟ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News