ವಿವೇಚನೆಯಿಲ್ಲದೇ ಕೈಗೊಂಡ ನೋಟು ನಿಷೇಧದಿಂದಾಗಿ ನಿರುದ್ಯೋಗ ಹೆಚ್ಚಳವಾಗಿದೆ: ಮನಮೋಹನ್‌ ಸಿಂಗ್

Update: 2021-03-02 10:52 GMT

ತಿರುವನಂತಪುರಂ:  ಬಿಜೆಪಿ ನೇತೃತ್ವದ ಸರಕಾರವು 2016ರಲ್ಲಿ ಸರಿಯಾಗಿ ವಿವೇಚಿಸದೆ ಕೈಗೊಂಡ ಅಮಾನ್ಯೀಕರಣ ನಿರ್ಧಾರದಿಂದಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಹಾಗೂ ಅನೌಪಚಾರಿಕ ಕ್ಷೇತ್ರ ದುಸ್ಥಿತಿಯಲ್ಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ರಾಜೀವ್  ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಡೆವಲೆಪ್ಮೆಂಟ್ ಸ್ಟಡೀಸ್ ಕೇರಳದಲ್ಲಿ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನದಲ್ಲಿ ಸಿಂಗ್ ಮಾತನಾಡುತ್ತಿದ್ದರು.

 ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸದೇ ಇರುವುದಕ್ಕೂ ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಕೇರಳ ಸಹಿತ ಹಲವಾರು ರಾಜ್ಯಗಳಲ್ಲಿ ಸರಕಾರಗಳ ಆರ್ಥಿಕ ಸ್ಥಿತಿ ಅತ್ಯಧಿಕ ಸಾಲ ಪಡೆಯುವುದರಿಂದ ಡೋಲಾಯಮಾನವಾಗಿದೆ ಇದು ಭವಿಷ್ಯದ ಬಜೆಟ್‍ಗಳ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಈಗಿನ ಡಿಜಿಟಲ್ ಕಾರ್ಯನಿರ್ವಹಣೆಯಿಂದ ಐಟಿ ಕ್ಷೇತ್ರ ಹೆಚ್ಚು ಬಾಧಿತವಾಗಿಲ್ಲದೇ ಇದ್ದರೂ ಪ್ರವಾಸೋದ್ಯಮ ಕ್ಷೇತ್ರ ಬಾಧಿತವಾಗಿದ್ದು ಕೇರಳದಲ್ಲಿ ಕೋವಿಡ್ ಪ್ರಮಾಣ ಏರಿಕೆಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಿದೆ ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಕೇರಳ ನೀಡಿದ ಹೆಚ್ಚಿನ ಒತ್ತಿನಿಂದಾಗಿ ದೇಶದ ವಿವಿಧೆಡೆಗಳು ಹಾಗೂ ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಸಾಧ್ಯವಾಗಿದ್ದು ಇಂತಹವರಿಂದ ರಾಜ್ಯಕ್ಕೆ ಹರಿದು ಬರುತ್ತಿರುವ ಹಣದಿಂದಾಗಿ ಇಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತು  ಪ್ರವಾಸೋದ್ಯಮ, ಐಟಿ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ ಕೇರಳದಲ್ಲಿ ಯುಡಿಎಫ್ ಅನುಸರಿಸುತ್ತಿರುವ ನೀತಿಯನ್ನೂ ಅವರು ಈ ಸಂದರ್ಭ ಶ್ಲಾಘಿಸಿದರು. ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಕೇರಳಕ್ಕೊಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News