×
Ad

"ಅರ್ಧ ಬೇಯಿಸಿದ ಅನುಪಯುಕ್ತ ಮಾಹಿತಿಯ ತುಣುಕು": ದಿಲ್ಲಿ ಗಲಭೆಗೆ ಸಂಬಂಧಿಸಿದ ವರದಿ ಕುರಿತು ಪೊಲೀಸರಿಗೆ ಕೋರ್ಟ್‌ ತರಾಟೆ

Update: 2021-03-02 17:16 IST

ಹೊಸದಿಲ್ಲಿ: ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮೇ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೊಬ್ಬರ ಮೇಲೆ ದಾಖಲಾದ ವಿಜಿಲೆನ್ಸ್ ವಿಚಾರಣಾ ವರದಿಯ ಕುರಿತು ದಿಲ್ಲಿ ಹೈಕೋರ್ಟ್ ಸೋಮವಾರ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ತಾನು ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ ಎಂದಿರುವ ಆಸಿಫ್ ಇಕ್ಬಾಲ್ ತನ್ಹಾ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಾಧ್ಯಮಗಳ ವಿಚಾರಣೆಯ ಕುರಿತು ಆರೋಪಿಸಿದ್ದರು.
ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ವಿಜಿಲೆನ್ಸ್ ವರದಿಯು ‘ಅರ್ಧ ಬೇಯಿಸಿದ ಹಾಗೂ ಅನುಪಯುಕ್ತ ಮಾಹಿತಿಯ ತುಣುಕು’ ಎಂದು ಹೇಳಿತು. 

ಈ ವಿಜಿಲೆನ್ಸ್ ವರದಿಯು ಸಣ್ಣ ಕಳ್ಳತನ ಪ್ರಕರಣದಲ್ಲಿ ಮಾಡುವ ಸಾಮಾನ್ಯ ವಿಚಾರಣೆಗಿಂತಲೂ ಕೆಟ್ಟದ್ದಾಗಿದೆ. ಇವು ಕೊರಿಯರ್ ಮೂಲಕ ಕಳುಹಿಸಲಾದ ಫೈಲ್ ಗಳಲ್ಲ. ಇವು ಕೈಯಲ್ಲಿ ಹಿಡಿದಿರುವ ಫೈಲ್ ಗಳಾಗಿವೆ ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಒಪ್ಪಿಕೊಳ್ಳಲಾಗದ ಹಾಗೂ ಸಾಕ್ಷಿಯಾಗಿ ಪರಿಗಣಿಸಲಾಗದ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಮಾಧ್ಯಮದಲ್ಲಿ ಸೋರಿಕೆಯಾಗಿದೆ ಹಾಗೂ ತನ್ನನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಕಳೆದ ವರ್ಷ 24ರ ವಯಸ್ಸಿನ ಆಸಿಫ್ ಇಕ್ಬಾಲ್ ತನ್ಹಾ ಹೇಳಿದ್ದರು.

ಅರ್ಜಿಗೆ ಉತ್ತರಿಸಿದ ನ್ಯಾಯಾಲಯವು ದಿಲ್ಲಿ ಪೊಲೀಸರು ಹಾಗೂ ಸುದ್ದಿ ವಾಹಿನಿಗಳಿಂದ ಉತ್ತರವನ್ನು ಕೋರಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿದ್ದ ದಿಲ್ಲಿ ಪೊಲೀಸರು, ನಾವು ರಾಜ್ಯ ಸರಕಾರ ಹಾಗೂ ಗೃಹ ಸಚಿವಾಲಯಕ್ಕೆ ಮಾತ್ರ ವರದಿ ಹಂಚಿಕೊಂಡಿದ್ದಾಗಿ ತಿಳಿಸಿತ್ತು.

ಇವರು ಹಿರಿಯ ಐಎಎಸ್ ಅಧಿಕಾರಿಗಳು. ನೀವು ಎಲ್ಲಿ ವಿಚಾರಣೆ ನಡೆಸಿದ್ದೀರಿ, ಯಾರನ್ನು ವಿಚಾರಿಸಿದ್ದೀರಿ? ಫೈಲ್‍ಗಳನ್ನು ಎಲ್ಲಿಗೆ ಕಳುಹಿಸಲಾಗಿದೆ?ದಿಲ್ಲಿ ಹಾಗೂ ಗೃಹ ಸಚಿವಾಲಯಕ್ಕೆ ಯಾರು ಕೊಟ್ಟಿದ್ದು?, ಅದನ್ನು ವಾಪಸ್ ತಂದಿದ್ದು ಯಾರು?..ಇದು ಯಾವುದು ವರದಿಯಲ್ಲಿಲ್ಲ. ಇದು ಸಂಪೂರ್ಣ ಮೌನವಾಗಿದೆ. ಇದು ಬೀದಿಯಲ್ಲಿ ಮಲಗಿರುವ ದಾಖಲೆಗಳಲ್ಲ ಎಂದು ನ್ಯಾಯಾಲಯವು ಕಟುವಾಗಿ ಹೇಳಿದೆ. 
ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಘಟನೆಯ ಸದಸ್ಯರಾದ ತನ್ಹಾ ಪೌರತ್ವ ಕಾನೂನಿನ ವಿರುದ್ದ ಪ್ರತಿಭಟನೆಗಳನ್ನು ಮುನ್ನಡೆಸಿದ್ದ ಜಾಮಿಯಾ ಸಮನ್ವಯ ಸಮಿತಿಯ ಭಾಗವಾಗಿದ್ದರು ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ (ಯುಎಪಿಎ) ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News