ಪ್ರಧಾನಿಯನ್ನು ಶ್ಲಾಘಿಸಿದ್ದ ಗುಲಾಂ ನಬಿ ಆಝಾದ್ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ಕಾರ್ಯಕರ್ತರು

Update: 2021-03-02 13:43 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಿಗೇ ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಝಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಡಿಡಿಸಿ ಸದಸ್ಯ ಹಾಗೂ ಜಮ್ಮು-ಕಾಶ್ಮೀರ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಶಾನವಾಝ್ ಚೌಧರಿ ನೇತೃತ್ವದಲ್ಲಿ ಜಮ್ಮು-ಕಾಶ್ಮೀರದ ಪ್ರೆಸ್ ಕ್ಲಬ್ ಹೊರಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೋದಿಯನ್ನು ಹೊಗಳಿದ್ದ ಗುಲಾಂ ನಬಿ ಆಝಾದ್ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ, ಪ್ರತಿಭಟನೆ ಹೊರಹಾಕಿದ್ದಾರೆ.

ಗುಲಾಂನಬಿ ಆಝಾದ್ ಅವರನ್ನು ದಶಕಗಳ ಕಾಲ ಬೆಳೆಸಿದ್ದು, ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ನಾಯಕತ್ವ. ಆದರೆ ಈಗ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಆಣತಿಯಂತೆ ವರ್ತಿಸುತ್ತಿರುವ ಆಝಾದ್ ಈಗ ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಆಝಾದ್ ರಂತಹ ನಾಯಕರ ಅನುಭವ ಪಕ್ಷಕ್ಕೆ ಬೆನ್ನಲುಬಾಗಬೇಕು. ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ನವಾಝ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕತ್ವದ ವಿರುದ್ದ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ನಾಯಕರ ಗುಂಪಿನ ಸಭೆ ಶನಿವಾರ ಜಮ್ಮುವಿನಲ್ಲಿ ನಡೆದಿತ್ತು. ಅದರಲ್ಲಿ ಆಝಾದ್ ಕೂಡ ಪ್ರಮುಖರಾಗಿದ್ದರು. ಈ ಸಭೆಯ ಮರುದಿನ ಆಝಾದ್ ಅವರು ಮೋದಿ ಅವರನ್ನು ಹೊಗಳಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಗುಲಾಂ ನಬಿ ಆಝಾದ್ ಪ್ರತಿಕೃತಿ ದಹಿಸುತ್ತಿರುವ, ಅವರ ವಿರುದ್ಧ ಘೋಷಣೆ ಕೂಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿನ್ನೆಲೆಯಲ್ಲಿ ಮುಚ್ಚಿಡಲು ಯತ್ನಿಸಲಿಲ್ಲ. ಇಂತಹ ನಾಯಕರನ್ನು ಇದಕ್ಕಾಗಿಯೇ ನಾನು ಇಷ್ಟಪಡುತ್ತೇನೆ ಎಂದು ಆಝಾದ್ ರವಿವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News