ಪಂಚ ರಾಜ್ಯ ಚುನಾವಣೆ: ಬಿಜೆಪಿ ಸೋಲಿಸುವಂತೆ ರೈತರಿಗೆ ಮನವಿ ಮಾಡಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

Update: 2021-03-02 14:39 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ)ಚುನಾವಣೆ ನಡೆಯಲಿರುವ ಐದು ರಾಜ್ಯಗಳಿಗೆ ತನ್ನ ನಾಯಕರುಗಳನ್ನು ಕಳುಹಿಸಿಕೊಡಲಿದ್ದು, ಈ ನಾಯಕರು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ರೈತರಲ್ಲಿ ಮನವಿ ಮಾಡಲಿದ್ದಾರೆ ಎಂದು ಸಂಘಟನೆಯ ನಾಯಕರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದಿಲ್ಲಿ ಗಡಿಭಾಗಗಳಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯು ಮಾರ್ಚ್ 6ರಂದು 100 ದಿನ ಪೂರೈಸಲಿದ್ದು, ಅಂದು ಪ್ರತಿಭಟನಾನಿರತ ರೈತರು ಕೆಎಂಪಿ ಎಕ್ಸ್ ಪ್ರೆಸ್ ವೇ ಅನ್ನು ಬ್ಲಾಕ್ ಮಾಡಲಿದ್ದಾರೆ.  ಮಾರ್ಚ್ 6ರಂದು ಎಕ್ಸ್ ಪ್ರೆಸ್ ವೇ ಅನ್ನು ವಿವಿಧ ಪಾಯಿಂಟ್ ಗಳಲ್ಲಿ ಬೆಳಗ್ಗೆ 11ರಿಂದ 5 ಗಂಟೆಗಳ ಕಾಲ ತಡೆ ಹೇರಲಾಗುತ್ತದೆ ಎಂದು ಎಸ್ ಕೆ ಎಂ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಎಸ್ ಕೆ ಎಂ ನಾಯಕರು ಕೋಲ್ಕತಾದಲ್ಲಿ ಮಾರ್ಚ್ 12ರಂದು ಸಾರ್ವಜನಿಕ ಸಭೆ ನಡೆಸಲಿದ್ದು, ಆಗ ಚುನಾವಣೆ ನಡೆಯಲಿರುವ ರಾಜ್ಯಗಳ ರೈತರಿಗೆ ಮನವಿ ಮಾಡಲಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಪಶ್ಚಿಮಬಂಗಾಳ ಹಾಗೂ ಕೇರಳ ಸಹಿತ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಎಸ್ ಕೆಎಂ ತಂಡಗಳು ತೆರಳಲಿವೆ ಎಂದು ಎಸ್ ಕೆ ಎಂ ನಾಯಕ ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.

“ನಾವು ಯಾವುದೇ ಪಕ್ಷಕ್ಕಾಗಿ ಮತಗಳನ್ನು ಕೇಳುವುದಿಲ್ಲ. ರೈತರ ಸಮಸ್ಯೆಗಳನ್ನು ನಿಭಾಯಿಸಲು ವಿಫಲವಾಗಿರುವ ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗಳಿಗೆ ಮತ ನೀಡುವಂತೆ ನಾವು ಮನವಿ ಮಾಡಲಿದ್ದೇವೆ. ಮೋರ್ಚಾದ ನಾಯಕರುಗಳು ವಿವಿಧ ಬೆಳೆಗಳಿಗೆ 1,000 ರೂ.ಗಿಂತ ಕಡಿಮೆ ಬೆಂಬಲ ಬೆಲೆ(ಎಂಎಸ್ ಪಿ) ಪಡೆಯುತ್ತಿರುವ ಕರ್ನಾಟಕ ರಾಜ್ಯಕ್ಕೂ ಭೇಟಿ ನೀಡಲಿದ್ದಾರೆ ಎಂದು ಯಾದವ್ ತಿಳಿಸಿದರು.

ಮಹಿಳಾ ದಿನವಾದ ಮಾರ್ಚ್ 8ರಂದು ಮಹಿಳಾ ಪ್ರತಿಭಟನಾಕಾರರು ದಿಲ್ಲಿ ಗಡಿಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ನೇತೃತ್ವವಹಿಸಲಿದ್ದಾರೆ ಎಂದು ಯಾದವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News