ಕೇರಳದ ಸಾಮಾಜಿಕ ಸಾಮರಸ್ಯ ಅಪಾಯದಲ್ಲಿದೆ, ನೂತನ ಅಭಿವೃದ್ಧಿ ಕಾರ್ಯತಂತ್ರದ ಅಗತ್ಯವಿದೆ: ಸೋನಿಯಾ ಗಾಂಧಿ

Update: 2021-03-02 16:22 GMT

ತಿರುವನಂತಪುರ,ಮಾ.2: ಕೇರಳದ ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆ ಅಪಾಯದಲ್ಲಿವೆ ಎಂದು ಮಂಗಳವಾರ ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,ಜನರಲ್ಲಿ ಭ್ರಾತ್ವತದ ಬಂಧಗಳನ್ನು ಬಲಗೊಳಿಸಲು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನೂತನ ಅಭಿವೃದ್ಧಿ ಕಾರ್ಯತಂತ್ರವೊಂದರ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಮತ್ತು ಉತ್ತೇಜಿಸಬೇಕು ಎನ್ನುವುದರಲ್ಲಿ ಕೇರಳವು ದೇಶದ ಇತರ ಭಾಗಗಳಿಗೆ ಮತ್ತು ವಿಶ್ವಕ್ಕೆ ಒಂದು ಪಾಠವಾಗಿದೆ. ಇವೀಗ ಅಪಾಯದಲ್ಲಿವೆ ಮತ್ತು ಭವಿಷ್ಯದ ಅಭಿವೃದ್ಧಿ ಕಾರ್ಯತಂತ್ರವು ಕೇರಳದ ವೈವಿಧ್ಯಪೂರ್ಣ ಸಮಾಜದ ಹೆಗ್ಗುರುತಾಗಿರುವ ಭ್ರಾತೃತ್ವದ ಬಂಧಗಳನ್ನು ಬಲಗೊಳಿಸುವುದನ್ನು ತನ್ನ ಮೂಲಗುರಿಗಳಲ್ಲಿ ಒಳಗೊಂಡಿರಬೇಕು ಎಂದು ಇಲ್ಲಿಯ ರಾಜೀವ ಗಾಂಧಿ ಅಭಿವೃದ್ಧಿ ಅಧ್ಯಯನ ಸಂಸ್ಥೆ (ಆರ್ಜಿಐಡಿಎಸ್)ಯು ಆಯೋಜಿಸಿದ್ದ ವರ್ಚುವಲ್ ಶೃಂಗಸಭೆಗೆ ತನ್ನ ಸಂದೇಶದಲ್ಲಿ ಸೋನಿಯಾ ಹೇಳಿದ್ದಾರೆ.
ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧವಾಗಿರುವ ಆರ್ಥಿಕ ಚಿಂತನ ಚಿಲುಮೆಯಾಗಿರುವ ಆರ್ಜಿಐಡಿಎಸ್ ನ  ಶೃಂಗಸಭೆ ‘ಪ್ರತೀಕ್ಷಾ 2030 ’ಅನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಉದ್ಘಾಟಿಸಿದರು.


ಬಹುಚರ್ಚಿತ ಕೇರಳ ಅಭಿವೃದ್ಧಿ ಮಾದರಿಯನ್ನು ತನ್ನ ಸಂದೇಶದಲ್ಲಿ ಪ್ರಸ್ತಾಪಿಸಿರುವ ಸೋನಿಯಾ,ಇಂದು ರಾಜ್ಯವು ಹೊಸ,ಈ ಹಿಂದೆಂದೂ ಕಂಡಿರದಿದ್ದ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಕೋವಿಡ್-19 ಸಾಂಕ್ರಾಮಿಕವು ಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ ಎಂದಿದ್ದಾರೆ. ಕೇರಳದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಭದ್ರತೆಯ ಕುರಿತು ಹೊಸದಾಗಿ ಚಿಂತನೆಗೆ ಅವರು ಕರೆ ನೀಡಿದ್ದಾರೆ.
ಕಳೆದ ಆರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಕೇರಳ ಅಭಿವೃದ್ಧಿ ಮಾದರಿಯು ಸಾರ್ವಜನಿಕ ಆರೋಗ್ಯ,ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಸಾಮಾಜಿಕ ನ್ಯಾಯಗಳಂತಹ ಕ್ಷೇತ್ರಗಳಲ್ಲಿ ಹಲವಾರು ಗಣನೀಯ ಸಾಧನೆಗಳನ್ನು ಮಾಡಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News