ಸೌದಿ ಅರೇಬಿಯದ ಭವಿಷ್ಯದ ವರ್ತನೆ ಮೇಲೆ ನಿಗಾ: ಅಮೆರಿಕ

Update: 2021-03-02 17:24 GMT

ವಾಶಿಂಗ್ಟನ್, ಮಾ. 2: ಸೌದಿ ಅರೇಬಿಯದ ಭವಿಷ್ಯದ ವರ್ತನೆಯ ಮೇಲೆ ಅಮೆರಿಕ ನಿಗಾ ಇಟ್ಟಿದೆ ಹಾಗೂ ಅದು ತನ್ನ ಮಾನವಹಕ್ಕುಗಳ ದಾಖಲೆಯನ್ನು ಸುಧಾರಿಸುತ್ತದೆ ಎಂಬ ನಿರೀಕ್ಷೆಯನ್ನು ಅಮೆರಿಕ ಹೊಂದಿದೆ ಎಂದು ಅಮೆರಿಕದ ವಕ್ತಾರರೊಬ್ಬರು ಸೋಮವಾರ ಹೇಳಿದ್ದಾರೆ.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯದ ಕೆಲವು ಪ್ರಜೆಗಳ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ. ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶದಂತೆ ಅವರ ಗುಪ್ತಚರ ಏಜಂಟರ ತಂಡವೊಂದು ಖಶೋಗಿಯನ್ನು ಬರ್ಬರವಾಗಿ ಹತ್ಯೆಗೈದಿದೆ ಎಂದು ಹೇಳುವ ಗುಪ್ತಚರ ವರದಿಯನ್ನು ಅಮೆರಿಕ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಆದರೆ, ಯುವರಾಜನ ಮೇಲೆ ಅಮೆರಿಕ ಯಾವುದೇ ದಿಗ್ಬಂಧನ ವಿಧಿಸಿಲ್ಲ.

ಯುವರಾಜನ ವಿರುದ್ಧ ದಂಡನಾ ಕ್ರಮ ತೆಗೆದುಕೊಳ್ಳದ ಅಮೆರಿಕದ ನಿರ್ಧಾರವನ್ನು ಮಾನವಹಕ್ಕು ಸಂಘಟನೆಗಳು ಹಾಗೂ ಇತರರು ಟೀಕಿಸಿದ್ದಾರೆ. ಖಶೋಗಿ ಹತ್ಯೆಗೆ ಉತ್ತರದಾಯಿತ್ವವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಅದೂ ಅಲ್ಲದೆ, ಮಾನವಹಕ್ಕು ವಿಷಯವನ್ನು ತನ್ನ ಆದ್ಯತೆಯ ವಿದೇಶ ನೀತಿಯನ್ನಾಗಿ ಮಾಡುವ ಬೈಡನ್ ಆಡಳಿತದ ನಿಲವನ್ನೂ ಅವರು ಪ್ರಶ್ನಿಸಿದ್ದಾರೆ.

‘‘ಜಮಾಲ್ ಖಶೋಗಿಯ ಬರ್ಬರ ಹತ್ಯೆಯ ಹಿಂದಿರುವ ಪ್ರಮುಖ ವಿಷಯಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಖಶೋಗಿ ಹತ್ಯೆಯ ಹಿಂದಿನ ತಂಡ ಬರ್ಖಾಸ್ತು ಮಾಡಿ: ಅಮೆರಿಕ ಒತ್ತಾಯ

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಹತ್ಯೆಗೈದಿದೆಯೆನ್ನಲಾದ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ನಿಯಂತ್ರಣದಲ್ಲಿರುವ ಬೇಹುಗಾರಿಕಾ ತಂಡವನ್ನು ಬರ್ಖಾಸ್ತು ಮಾಡುವಂತೆ ಅಮೆರಿಕ ಸೋಮವಾರ ಸೌದಿ ಅರೇಬಿಯವನ್ನು ಒತ್ತಾಯಿಸಿದೆ.

ಈ ತಂಡದ ಮೇಲೆ ಅಮೆರಿಕ ಇತ್ತೀಚೆಗೆ ದಿಗ್ಬಂಧವನ್ನು ವಿಧಿಸಿದೆ.

 ‘‘ಈ ಗುಂಪನ್ನು ಬರ್ಖಸ್ತುಗೊಳಿಸಿ ಹಾಗೂ ಸಾಂಸ್ಥಿಕ ಮತ್ತು ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೊಳಿಸಿ ಎಂಬುದಾಗಿ ನಾವು ಸೌದಿ ಅರೇಬಿಯವನ್ನು ಒತ್ತಾಯಿಸಿದ್ದೇವೆ. ಭಿನ್ನಮತೀಯರ ವಿರುದ್ಧದ ಚಟುವಟಿಕೆಗಳು ಮತ್ತು ಕ್ರಮಗಳಿಗೆ ತಡೆ ಹಾಕುವುದಕ್ಕಾಗಿ ಈ ಕ್ರಮಗಳ ಅಗತ್ಯವಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

ಸೌದಿ ಯುವರಾಜ ವಿರುದ್ಧ ಪತ್ರಕರ್ತರ ಸಂಘಟನೆಯಿಂದ ಮೊಕದ್ದಮೆ

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಫ್ರಾನ್ಸ್‌ನ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್‌’ ಸಂಘಟನೆಯು, ‘ಮಾನವತೆಯ ವಿರುದ್ಧದ ಅಪರಾಧ’ಕ್ಕಾಗಿ ಜರ್ಮನಿಯ ನ್ಯಾಯಾಲಯವೊಂದರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

 ಸೌದಿ ಅರೇಬಿಯವು ಖಶೋಗಿ ಹಾಗೂ ಇತರ ಡಝನ್‌ಗಟ್ಟಳೆ ಪತ್ರಕರ್ತರಿಗೆ ಹಿಂಸೆ ನೀಡಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಜರ್ಮನಿಯ ಅಂತರ್‌ರಾಷ್ಟ್ರೀಯ ಕಾರ್ಯವ್ಯಾಪ್ತಿ ಹೊಂದಿರುವ ಕಾನೂನುಗಳ ಅಡಿಯಲ್ಲಿ ಖಶೋಗಿ ಹತ್ಯೆ ಬಗ್ಗೆ ತನಿಖೆ ನಡೆಸಬೇಕು ಎಂದು ಅದು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News