ಮಾ.1 ನನ್ನ ಪಾಲಿಗೆ ವಾರ್ಷಿಕೋತ್ಸವದ ದಿನವಿದ್ದಂತೆ: ದಿಲ್ಲಿಯ ಮೊದಲ ಕೋವಿಡ್-19 ರೋಗಿ

Update: 2021-03-02 18:19 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.2: ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಕೋವಿಡ್-19 ಪ್ರಕರಣ ವರದಿಯಾಗಿದ್ದ ಕಳೆದ ವರ್ಷದ ಮಾ.1 ಹೆಚ್ಚಿನ ದಿಲ್ಲಿ ನಿವಾಸಿಗಳು ತಮ್ಮ ನೆನಪಿನಿಂದ ಅಳಿಸಲು ಬಯಸುವ ದಿನವಾಗಿದೆ. ಆದರೆ ಈ ದಿನಾಂಕವು ದಿಲ್ಲಿಯ ಮೊದಲ ಕೋವಿಡ್-19 ರೋಗಿ,ಉದ್ಯಮಿ ರೋಹಿತ್ ದತ್ತಾ ಅವರ ನೆನಪಿನಂಗಳದಲ್ಲಿ ಬಲವಾಗಿ ಬೇರೂರಿದೆ.

 ರೋಗನಿರ್ಣಯವಾದ ನಂತರ ಕಳಂಕಿತನೆಂಬಂತೆ ನೋಡಲ್ಪಡುತ್ತಿದ್ದ ಆರಂಭಿಕ ದಿನಗಳಿಂದ ಗೂಗಲ್‌ನಲ್ಲಿ ಚಿರಪರಿಚಿತ ಹೆಸರು ಮತ್ತು ಕ್ವಿಝಿಂಗ್ ವೇದಿಕೆಗಳಲ್ಲಿ ಜನಪ್ರಿಯ ವಿಷಯವಾಗುವವರೆಗೆ ತನ್ನ ಜೀವನವು ಒಂದು ಪೂರ್ಣ ಸುತ್ತನ್ನು ಮುಗಿಸಿದೆ ಎನ್ನುತ್ತಾರೆ ದತ್ತಾ(46).

‘ನನ್ನದು ಮೊದಲ ಪ್ರಕರಣವಾಗಿದ್ದರಿಂದ ಆರಂಭದಲ್ಲಿ ಬಹಳಷ್ಟು ಭೀತಿ ಮತ್ತು ತಪ್ಪಿನ ಭಾವನೆ ಕಾಡಿತ್ತು. ಉದ್ಯಮ ಸಂಬಂಧಿ ಇಟಲಿ ಪ್ರವಾಸದಿಂದ ಆಗಷ್ಟೇ ಮರಳಿದ್ದ ನಾನು ಈ ಹೊಸ ವೈರಸ್ ಜನರಲ್ಲಿ ಹೆಚ್ಚಿನ ಭೀತಿ,ಆತಂಕಗಳನ್ನು ಸೃಷ್ಟಿಸಿದ್ದ ಯಾರೂ ಊಹಿಸದಿದ್ದ ಪರಿಸ್ಥಿತಿಯಲ್ಲಿ ಸಿಲುಕಿದ್ದೆ ಮತ್ತು ಕೊರೋನವೈರಸ್‌ನ ವಾಹಕನಾಗಿದ್ದೇನೆ ಎಂಬ ಕೀಳರಿಮೆ ನನ್ನನ್ನು ಕಾಡುತ್ತಿತ್ತು’ ಎಂದು ಪೂರ್ವ ದಿಲ್ಲಿಯ ಮಯೂರ ವಿಹಾರ ನಿವಾಸಿ ದತ್ತಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ನೆನಪಿಸಿಕೊಂಡರು.

 ದತ್ತಾ ಕಳೆದ ವರ್ಷದ ಫೆ.25ರಂದು ಇಟಲಿಯಿಂದ ಮರಳಿದ್ದು,ಅದೇ ದಿನ ರಾತ್ರಿ ಜ್ವರವು ಕಾಣಿಸಿಕೊಂಡಿತ್ತು. ಮರುದಿನ ಬೆಳಿಗ್ಗೆ ಸ್ಥಳೀಯ ವೈದ್ಯರನ್ನು ಭೇಟಿಯಾಗಿ ಜ್ವರಕ್ಕೆ ಔಷಧಿಯನ್ನು ತೆಗೆದುಕೊಂಡಿದ್ದರು. ಫೆ.28ರಂದು ಅವರ 12 ವರ್ಷ ಪ್ರಾಯದ ಮಗನ ಹುಟ್ಟುಹಬ್ಬವಿದ್ದು,ಅದಕ್ಕಾಗಿ ದಕ್ಷಿಣ ದಿಲ್ಲಿಯ ಐಷಾರಾಮಿ ಹೋಟೆಲ್ಲೊಂದರಲ್ಲಿ ಪುಟ್ಟ ಪಾರ್ಟಿಯನ್ನು ಆಯೋಜಿಸಿದ್ದರು. ಅಂದು ರಾತ್ರಿ ಮತ್ತೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.

ಫೆಬ್ರವರಿ ಅಂತ್ಯದ ವೇಳೆಗೆ ಕೊರೋನವೈರಸ್ ಚೀನಾ ಮತ್ತು ಇಟಲಿ ತುಂಬಾ ಹರಡಿತ್ತು.

ಈ ಹಿನ್ನೆಲೆಯಲ್ಲಿ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ನೀಡಲು ದತ್ತಾ ನಿರ್ಧರಿಸಿದ್ದರು. ಅಲ್ಲಿ ಫೆ.29ರಂದು ಕೋವಿಡ್-19 ಪರೀಕ್ಷೆಗಾಗಿ ಅವರ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಮಾ.1ರಂದು ವರದಿ ಬಂದಿದ್ದು,ಅವರಿಗೆ ಕೊರೋನವೈರಸ್ ಸೋಂಕು ತಗಲಿದ್ದು ದೃಢಪಟ್ಟಿತ್ತು. 14 ದಿನಗಳ ಕಾಲ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲ್ಪಟ್ಟಿದ್ದ ದತ್ತಾ ನಂತರ 14 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ಗೊಳಪಟ್ಟಿದ್ದರು ಮತ್ತು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು.

ಈ ದಿನಾಂಕಗಳು ನಿಮ್ಮ ಮಟ್ಟಿಗೆ ಮಹತ್ವವನ್ನು ಪಡೆದುಕೊಂಡಿವೆಯೇ ಎಂಬ ಪ್ರಶ್ನೆಗೆ ಈ ಫೆಬ್ರವರಿ 28ರಂದು ಮಗನ 13ನೇ ಹುಟ್ಟುಹಬ್ಬವನ್ನು ಹೆಚ್ಚು ಆಡಂಬರವಿಲ್ಲದೆ ಆಚರಿಸಿದ್ದ ದತ್ತಾ,‘ಮಾರ್ಚ್ 1 ನನ್ನ ಪಾಲಿಗೆ ವಾರ್ಷಿಕೋತ್ಸವದ ದಿನವಿದ್ದಂತೆ ಮತ್ತು ನಾನು ಮತ್ತು ನನ್ನ ಕುಟುಂಬ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ’ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News