ಮಾಸ್ಕ್ ದಂಡ ಎಲ್ಲರಿಗೂ ಸಮಾನವಾಗಿ ವಿಧಿಸಲಿ

Update: 2021-03-02 18:04 GMT

ಮಾನ್ಯರೇ,

ರಾಜ್ಯದಲ್ಲಿ ಈಗಾಗಲೇ ಕೊರೋನ ಕೇಸ್‌ಗಳ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ಕೊರೋನ ಮುಕ್ತ ರಾಜ್ಯವಾಗಬಹುದು. ಆದರೂ ರಾಜ್ಯ ಸರಕಾರದ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಇನ್ನಷ್ಟು ಜಾಗೃತಿಗೊಳಿಸುವ ಉದ್ದೇಶದಿಂದ ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈ ದಂಡ ಪ್ರಯೋಗ ಕೇವಲ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ಬರೀ ಬಡ ಮತ್ತು ಮಧ್ಯಮ ವರ್ಗದವರನ್ನೇ ಟಾರ್ಗೆಟ್ ಮಾಡುತ್ತಿರುವುದು ಎಷ್ಟು ಸರಿ?

ಇತ್ತೀಚೆಗೆ ನಡೆದ ಕುರುಬ ಮತ್ತು ಪಂಚಮಸಾಲಿ ಮೀಸಲಾತಿ ಸಮಾವೇಶಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಜನರು ಆಗಮಿಸಿದ್ದರು. ಆದರೆ ಅಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ದಿನನಿತ್ಯ ಅನೇಕ ಪ್ರತಿಭಟನೆಗಳು, ರಾಜಕೀಯ ನಾಯಕರ ಸಮಾರಂಭ, ಸಮಾವೇಶಗಳು ನಡೆಯುತ್ತಲೇ ಇವೆ. ಅಲ್ಲಿ ಲಕ್ಷಾಂತರ ಜನರು ಮಾಸ್ಕ್ ಧರಿಸದಿದ್ದರೂ ಯಾರೊಬ್ಬರಿಗೂ ದಂಡ ವಿಧಿಸದೆ ಜಾಣ ಕುರುಡು ಪ್ರದರ್ಶಿಸಿ ತಾರತಮ್ಯ ಮಾಡುತ್ತಿರುವುದು ಎಷ್ಟು ಸರಿ?

ಇದುವರೆಗೂ ಸಚಿವರು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು, ಮಠಾಧೀಶರಲ್ಲಿ ಎಷ್ಟು ಜನರಿಗೆ ದಂಡ ವಿಧಿಸಿದ್ದಾರೆ ಎಂಬುದನ್ನು ಸರಕಾರ ತೋರಿಸಲಿ. ಸರಕಾರದ ನಿಯಮದ ಪ್ರಕಾರ ಯಾರು ಎಷ್ಟು ದೊಡ್ಡವರಿದ್ದರೂ ಕಾನೂನು ಎಲ್ಲರಿಗೂ ಒಂದೇ ಆಗಬೇಕು. ರಾಜ್ಯದ ರಾಜಧಾನಿಯಲ್ಲಿಯೇ ಈ ತಾರತಮ್ಯ ಎಸಗುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ದಂಡ ವಿಧಿಸುವುದೇ ಆದರೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ವಿಧಿಸಲಿ ಅಥವಾ ದಂಡ ಪ್ರಯೋಗವನ್ನೇ ರದ್ದು ಮಾಡಲಿ. ಸರಕಾರದ ಈ ದಂಡ ಪ್ರಯೋಗ ಕೇವಲ ಬಡ ಬಗ್ಗರಿಗಷ್ಟೆಯೇ?

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News