ಹಾಸ್ಟೆಲ್‌ ಬಾಲಕಿಯರನ್ನು ಬಲವಂತವಾಗಿ ನಗ್ನ ನೃತ್ಯ ಮಾಡಿಸಿದ ಪೊಲೀಸರು: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

Update: 2021-03-03 10:47 GMT
ಸಾಂದರ್ಭಿಕ ಚಿತ್ರ

ಮುಂಬೈ: ಜಲ್ಗಾಂವ್‌ ನ ಹಾಸ್ಟೆಲ್‌ನಲ್ಲಿ ಬಾಲಕಿಯರನ್ನು ಪೊಲೀಸರು ಬಲವಂತವಾಗಿ ನಗ್ನ ನೃತ್ಯ ಮಾಡಲು ಒತ್ತಾಯಿಸಿದ ಘಟನೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಗೃಹ ಸಚಿವ ಅನಿಲ್ ದೇಶ್‌ ಮುಖ್ ಬುಧವಾರ ಹೇಳಿದ್ದಾರೆ. ಈ ವಿಷಯವನ್ನು ವಿರೋಧ ಪಕ್ಷದ ಸದಸ್ಯರು ಎತ್ತಿದ ನಂತರ ಸಚಿವರು ರಾಜ್ಯ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

 ಈ ಕುರಿತಾದಂತೆ ವಿಧಾನಸಭೆಯಲ್ಲಿ ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ಸರಕಾರವು ಈ ವಿಷಯದ ಬಗ್ಗೆ ಗಂಭೀರವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಾಧ್ಯಮ ವರದಿಗಳ ಪ್ರಕಾರ, ಜಲ್ಗಾಂವ್‌ನ ಹಾಸ್ಟೆಲ್‌ನಲ್ಲಿ ಹೊರಗಿನ ಕೆಲ ವ್ಯಕ್ತಿಗಳು ಹಾಗೂ ಪೊಲೀಸರನ್ನು  ತನಿಖೆಯ ನೆಪದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ ಮತ್ತು ಕೆಲವು ಹುಡುಗಿಯರನ್ನು ಬಲವಂತವಾಗಿ ವಸ್ತ್ರ ಕಳಚಲು ಮತ್ತು ಡ್ಯಾನ್ಸ್ ಮಾಡಲು ಒತ್ತಾಯಿಸಲಾಗಿದೆ ಎಂದು ದೂರಿದ್ದಾರೆ. ಈ ಪ್ರಕರಣದ ವೀಡಿಯೊ ಕ್ಲಿಪ್ ಸಾಮಾಜಿಕ ತಾಣದಾದ್ಯಂತ ಹರಿದಾಡಿತ್ತು.

"ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ನಂತರ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು"ಎಂದು ದೇಶ್ಮುಖ್ ಹೇಳಿದರು.

"ಘಟನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮತ್ತು ಇತರ ದಾಖಲೆಗಳನ್ನು ಕೋರಲಾಗಿದೆ ಮತ್ತು ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ" ಎಂದು ಅವರು ಹೇಳಿದರು. ಎಲ್ಲಾ ಮಾಹಿತಿ ಸಂಗ್ರಹಿಸಿದ ನಂತರ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News