ಎಂ.ಎಸ್. ಧೋನಿಯ ಮತ್ತೊಂದು ನಾಯಕತ್ವ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿ ಸಜ್ಜು

Update: 2021-03-03 14:47 GMT

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ದ ಇಲ್ಲಿ ಮಾರ್ಚ್ 4ರಿಂದ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್  ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲು ಸಜ್ಜಾಗಿರುವ ವಿರಾಟ್ ಕೊಹ್ಲಿ ತನ್ನ ಯಶಸ್ವಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಗುರುವಾರ ಕೊಹ್ಲಿ ಅವರು ಟಾಸ್ ಚಿಮ್ಮಿಸಲು ಮೈದಾನಕ್ಕೆ ಇಳಿದ ತಕ್ಷಣ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ನಾಯಕನಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ್ದ ಧೋನಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಕೊಹ್ಲಿ ಭಾರತದ ನಾಯಕನಾಗಿ ಆಡಲಿರುವ 60ನೇ ಟೆಸ್ಟ್ ಪಂದ್ಯವಾಗಿದೆ. ಧೋನಿ ತನ್ನ 7 ವರ್ಷಗಳ ನಾಯಕತ್ವದ ಅವಧಿಯಲ್ಲಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದರು.

ಕೊಹ್ಲಿ ಈಗಾಗಲೇ 59 ಪಂದ್ಯಗಳಲ್ಲಿ 35 ರಲ್ಲಿ ಜಯ ಸಾಧಿಸುವುದರೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಹೊರಹೊಮ್ಮಿದ್ದಾರೆ. 60 ಪಂದ್ಯಗಳಲ್ಲಿ 27ರಲ್ಲಿ ಜಯ ಸಾಧಿಸಿರುವ ಧೋನಿ 2ನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗುಲಿ(21) ಹಾಗೂ ಮುಹಮ್ಮದ್ ಅಝರುದ್ದೀನ್ (14)ಆ ನಂತರದ ಸ್ಥಾನದಲ್ಲಿದ್ದಾರೆ.

ಕಳೆದ ವಾರ ಮೊಟೆರಾದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 10 ವಿಕೆಟ್ ಗಳಿಂದ ಮಣಿಸಿತ್ತು. ಆಗ ಕೊಹ್ಲಿ ನಾಯಕನಾಗಿ ತವರು ನೆಲದಲ್ಲಿ 22ನೇ ಟೆಸ್ಟ್ ಪಂದ್ಯವನ್ನು ಜಯಿಸಿ ಧೋನಿಯ ದಾಖಲೆಯನ್ನು ಹಿಂದಿಕ್ಕಿದ್ದರು. ಈ ಗೆಲುವಿನೊಂದಿಗೆ ಕೊಹ್ಲಿ ಭಾರತದಲ್ಲಿ ಆಡಿದ್ದ 29 ಟೆಸ್ಟ್ ನಲ್ಲಿ 22ರಲ್ಲಿ ಜಯ ಸಾಧಿಸಿದ್ದರು. ಧೋನಿ ಸ್ವದೇಶದಲ್ಲಿ 30 ಪಂದ್ಯಗಳಲ್ಲಿ ಆಡಿ 21ರಲ್ಲಿ ಜಯ ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News