ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಪ್ರಕ್ರಿಯೆಗೆ ಕಾಂಗ್ರೆಸ್ ಅತೃಪ್ತಿ

Update: 2021-03-05 16:40 GMT

ಚೆನ್ನೈ, ಮಾ.5: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್(ಎಸ್‌ಪಿಎ)ನ ಭಾಗವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕೇವಲ 18 ಸ್ಥಾನ ಬಿಟ್ಟುಕೊಟ್ಟಿರುವ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರ ಒಂದು ವರ್ಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷಕ್ಕೆ 40 ಸ್ಥಾನ ದೊರಕಬೇಕು ಎಂದು ಕಾಂಗ್ರೆಸ್ ಆರಂಭದಲ್ಲೇ ಸ್ಪಷ್ಟಪಡಿಸಿತ್ತು. ಕನಿಷ್ಟ 30-31 ಸ್ಥಾನಗಳನ್ನು ನಮಗೆ ಬಿಟ್ಟುಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಕ್ಕೆ ಗೌರವಾನ್ವಿತ ಸ್ಥಾನದ ಅವಕಾಶ ದೊರಕದಿದ್ದರೆ ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ಅನಿವಾರ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಆಡಳಿತಾರೂಢ ಎಐಎಡಿಎಂಕೆ ಮೈತ್ರಿಕೂಟದ ಪಕ್ಷ ಡಿಎಂಡಿಕೆ ಸೀಟು ಹಂಚಿಕೆ ಬಗ್ಗೆ ಅಸಮಾಧಾನ ಸೂಚಿಸಿದಾಗ ಪ್ರಭಾವೀ ಸಚಿವರೇ ಖುದ್ದಾಗಿ ಡಿಎಂಡಿಕೆ ಮುಖ್ಯಸ್ಥೆ ವಿಜಯಶಾಂತಿಯನ್ನು ಭೇಟಿಯಾಗಿ ಅವರ ಮನವೊಲಿಸಲು ಶಕ್ತರಾಗಿದ್ದಾರೆ.ಕಾಂಗ್ರೆಸ್‌ನೊಂದಿಗೆ ಆರಂಭದ ಮಾತುಕತೆ ವಿಫಲವಾದ ಬಳಿಕ ಡಿಎಂಕೆಯ ಯಾವುದೇ ಹಿರಿಯ ಮುಖಂಡರು ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸದ ಬಗ್ಗೆಯೂ ಪಕ್ಷದಲ್ಲಿ ಅಸಮಾಧಾನವಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಹೇಳಿದ್ದಾರೆ. ಡಿಎಂಕೆ ಗೆಲುವಿಗೆ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಮುಂದಿನ ಮುಖ್ಯಮಂತ್ರಿಯಾಗಬೇಕಿದ್ದರೆ ಕಾಂಗ್ರೆಸ್‌ನ ಮತಗಳ ಪಾಲೂ ಅತ್ಯಗತ್ಯವಾಗಿದೆ. ಆದರೆ ಅವರಿಗೆ ನಮ್ಮ ಅಗತ್ಯವಿಲ್ಲ ಎಂದು ಕಾಣಿಸುತ್ತದೆ. ಒಂದೆರಡು ದಿನ ಕಾಯುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದವರು ಹೇಳಿದ್ದಾರೆ. ನಮ್ಮ ಮುಖಂಡ ರಾಹುಲ್ ಗಾಂಧಿ ರಾಜ್ಯಕ್ಕೆ ನೀಡಿದ ಭೇಟಿಗೆ ಜನತೆಯ ಉತ್ತಮ ಸ್ಪಂದನೆ ದಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗೌರವಾನ್ವಿತ ಪ್ರಮಾಣದ ಸೀಟು ದೊರಕಬೇಕಿದೆ. ಇಲ್ಲದಿದ್ದರೆ ಡಿಎಂಕೆಯ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಅತೃಪ್ತರಾಗಿರುವ ಇತರ ಮಿತ್ರಪಕ್ಷಗಳ ಜತೆ ಸೇರಿ ಚುನಾವಣೆ ಎದುರಿಸುವ ಆಯ್ಕೆಯೂ ನಮ್ಮ ಎದುರಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News