ತೈಲ ಬೆಲೆಯ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ-ರಾಜ್ಯದ ಜಂಟಿ ನಿರ್ಧಾರ ಅಗತ್ಯ: ನಿರ್ಮಲಾ ಸೀತಾರಾಮನ್

Update: 2021-03-05 18:02 GMT

ಹೊಸದಿಲ್ಲಿ, ಮಾ.5: ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಬೇಕು ಎಂಬ ಗ್ರಾಹಕರ ಆಗ್ರಹ ಗಮನಿಸಿದ್ದೇವೆ. ಆದರೆ ತೈಲದರದ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ನಿರ್ಧರಿಸಬೇಕಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದಲ್ಲಿ ಪೆಟ್ರೋಲ್ ಬೆಲೆಯಲ್ಲಿ ತೆರಿಗೆಯ ಪ್ರಮಾಣ 60% ಆಗಿದ್ದರೆ ಡೀಸೆಲ್ ಬೆಲೆಯಲ್ಲಿ 55% ತೆರಿಗೆಯ ಪಾಲಾಗಿದೆ. ತೈಲ ಬೆಲೆ ಏರಿಕೆ ನಿಜವಾಗಿಯೂ ಗ್ರಾಹಕರ ಮೇಲಿನ ಹೊರೆಯಾಗಿದ್ದು ದರ ಇಳಿಸಬೇಕೆಂಬ ಗ್ರಾಹಕರ ಆಗ್ರಹವನ್ನು ಅರ್ಥಮಾಡಿಕೊಳ್ಳಬಹುದು. ತೈಲ ಬೆಲೆ ಎಂಬುದು ಧರ್ಮಸಂಕಟದ ವಿಷಯವಾಗಿದೆ. ತೈಲ ದರ ಇಳಿಸುವ ಬಗ್ಗೆ ಕೇಂದ್ರ ಸರಕಾರ ಮಾತ್ರ ನಿರ್ಧಾರ ಕೈಗೊಳ್ಳುವಂತಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರ ಸೇರಿ ನಿರ್ಧರಿಸಬೇಕಾದ ವಿಷಯವಿದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹೊಸದಿಲ್ಲಿಯ ಐಡಬ್ಲ್ಯೂಪಿಸಿಯಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೆಟ್ರೋಲ್, ಡೀಸೆಲ್ ಬೆಲೆಯ ಮೇಲೆ ವಿಧಿಸುವ ತೆರಿಗೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದಾಯ ಸಂಗ್ರಹಿಸುತ್ತವೆ. ಕೇಂದ್ರ ಸಂಗ್ರಹಿಸಿದ ತೆರಿಗೆಯಲ್ಲಿ 41% ರಾಜ್ಯಗಳಿಗೆ ಸಲ್ಲುತ್ತದೆ ಎಂದವರು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಷಯದ ಬಗ್ಗೆ ಪ್ರಸ್ತಾವಿಸಿದ ಅವರು, ಈ ಬಗ್ಗೆ ಜಿಎಸ್‌ಟಿ ಸಮಿತಿ ನಿರ್ಧರಿಸಬೇಕಿದೆ. ಈ ವಿಷಯದ ಬಗ್ಗೆ ಜಿಎಸ್‌ಟಿ ಸಮಿತಿ ಚರ್ಚೆ ನಡೆಸಿದರೆ ಒಂದು ನಿರ್ಧಾರಕ್ಕೆ ಬರಲಾಗುವುದು. ಸಮಿತಿ ಕೈಗೊಳ್ಳಬೇಕಾದ ನಿರ್ಧಾರವಿದು ಎಂದರು. ಈ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿರುವ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ಮುಂದಿರಿಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಎಸ್‌ಟಿ ಸಮಿತಿ ಸಭೆ ನಡೆಯುವ ಕೆಲ ದಿನ ಮೊದಲು ಈ ವಿಷಯ ಸ್ಪಷ್ಟವಾಗಲಿದೆ ಎಂದರು.

ಕಳೆದ ವರ್ಷ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಾಖಲೆ ಮಟ್ಟಕ್ಕೆ ಕುಸಿದಾಗ, ಇದರ ಲಾಭ ಪಡೆಯಲು ಕೇಂದ್ರ ಸರಕಾರ ತೈಲ ದರದ ಮೇಲಿನ ಕೇಂದ್ರ ಅಬಕಾರಿ ತೆರಿಗೆಯನ್ನು ಹೆಚ್ಚಿಸಿತ್ತು. ಇದೀಗ ಕೇಂದ್ರ ಅಬಕಾರಿ ತೆರಿಗೆ ದರವನ್ನು ಇಳಿಸಲು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಹಾರಿಕೆಯ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News