ದುರ್ಬಲರ ಹಕ್ಕನ್ನು ಕಸಿಯದಿರಲಿ

Update: 2021-03-05 19:30 GMT

ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದೊಂದಿಗೆ ನಮ್ಮ ಸಂವಿಧಾನವು ಮೀಸಲಾತಿಗೆ ಒಪ್ಪಿಗೆ ನೀಡಿದೆ. ಭಾರತದ ಪರಿಚ್ಛೇದದಲ್ಲಿ ಜಾತಿಯ ಆಧಾರದಿಂದ ಶೋಷಣೆಗೆ ಒಳಗಾದವರನ್ನು ಹೆಸರಿಸಿ ಅವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ನೀಡಲಾಗಿದೆ. ತಮ್ಮ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ಮೂಲೆಗುಂಪಾದ ಜನಾಂಗಗಳನ್ನು ಗುರುತಿಸಿ ಪರಿಶಿಷ್ಟ ಪಂಗಡಗಳೆಂದು ಹೆಸರಿಸಿ ಅವರಿಗೂ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದೇ ರೀತಿ ಕೆಲವೊಂದು ಚಾರಿತ್ರಿಕ ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಹಿಂದುಳಿದಿರುವ ಸಮುದಾಯ ಮತ್ತು ಪಂಗಡಗಳನ್ನು ಗುರುತಿಸಿ ಇತರ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮೀಸಲಾತಿ ಒದಗಿಸಲಾಗಿದೆ.

ಒಟ್ಟಿನಲ್ಲಿ ಸರಕಾರದ ಎಲ್ಲ ನೇಮಕಾತಿ ಮತ್ತು ಆಯ್ಕೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಾಗದ ರೀತಿಯಲ್ಲಿ ಮೀಸಲಾತಿಗೆ ಒಪ್ಪಿಗೆಯನ್ನು ನೀಡಲಾಗಿದೆ. ಈ ಮೀಸಲಾತಿಯು ಇತರರೊಂದಿಗೆ ಸ್ಪರ್ಧಿಸಲು ಅಶಕ್ತರಾದ ದುರ್ಬಲರಿಗೆ ಶಕ್ತಿ ತುಂಬಿ ಅವರನ್ನೂ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ತೊಡಗಿಸುವ ಸಲುವಾಗಿದೆ.

ಆದರೆ ಇಂದು ಪ್ರಬಲರು ಕುತಂತ್ರದ ಮೂಲಕ ಅಶಕ್ತರು ಮತ್ತು ದುರ್ಬಲರಿಗೆ ನ್ಯಾಯ ಒದಗಿಸಲು ಕಲ್ಪಿಸಿರುವ ಮೀಸಲಾತಿಯ ಲಾಭವನ್ನು ಪಡೆದು ದುರ್ಬಲರನ್ನು ಇನ್ನೂ ಹೆಚ್ಚು ಪ್ರಪಾತಕ್ಕೆ ತಳ್ಳುವ ಹುನ್ನಾರದಲ್ಲಿದ್ದಾರೆ. ಈ ಬಗ್ಗೆ ಅರ್ಹ ದುರ್ಬಲ ಸಮುದಾಯ ಮತ್ತು ಜನಾಂಗದಲ್ಲಿ ತಳಮಟ್ಟದ ಜಾಗೃತಿಯನ್ನು ಮೂಡಿಸಬೇಕಾಗಿದೆ.

ಈಗ ಕೇಂದ್ರ ಸರಕಾರವು ಕಾನೂನಿನ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಹೊಸತಾಗಿ ಶೇ. 10 ಮೀಸಲಾತಿಯನ್ನು ಒದಗಿಸಿದೆ. ಇದರ ಸಂಪೂರ್ಣ ಲಾಭವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದ ಸಮುದಾಯಗಳು ಪಡೆದುಕೊಳ್ಳುತ್ತವೆ.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಮುಸ್ಲಿಮ್ ಸಮುದಾಯವು ಬ್ರಿಟಿಷರನ್ನು ಎಲ್ಲಾ ರೀತಿಯಲ್ಲೂ ಎದುರುಹಾಕಿಕೊಂಡಿತು. ಬಿಳಿಯರು ಜಾರಿಗೆ ತಂದ ಆಧುನಿಕ ಶಿಕ್ಷಣದಿಂದಲೂ ಮುಸ್ಲಿಮರು ದೂರ ಸರಿದರು. ಈ ಎಲ್ಲಾ ಚಾರಿತ್ರಿಕ ಕಾರಣದಿಂದ ಮುಸ್ಲಿಮರು ಬ್ರಿಟಿಷ್ ಭಾರತದಲ್ಲೇ ಹಿಂದುಳಿಯುವಂತಾಯಿತು. ಸಮುದಾಯದ ಶೋಚನೀಯ ಪರಿಸ್ಥಿತಿಯನ್ನು ಮನಗಂಡ ಅಂದಿನ 35 ಮಂದಿ ಮುಸ್ಲಿಮ್ ನೇತಾರರ ನಿಯೋಗವೊಂದು 1905ರಲ್ಲಿ ವೈಸ್‌ರಾಯ್ ಅವರನ್ನು ಭೇಟಿಯಾಗಿ ಬ್ರಿಟಿಷ್ ಇಂಡಿಯಾದಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದರು.

ಅಂದಿನ ಮೈಸೂರು ಮಹಾರಾಜರು 1918ರಲ್ಲಿ ಸರಕಾರಿ ಹುದ್ದೆಗಳೆಲ್ಲವೂ ಬ್ರಾಹ್ಮಣರ ಕೈಯಲ್ಲಿರುವುದನ್ನು ಮನಗಂಡು ಈ ಬಗ್ಗೆ ಅಧ್ಯಯನಕ್ಕಾಗಿ ಮಿಲ್ಲರ್ ಸಮಿತಿಯನ್ನು ರಚಿಸುತ್ತಾರೆ. ಈ ಸಮಿತಿಯ ಶಿಫಾರಸಿನಂತೆ ರಾಜ್ಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ರಾಜರ ಈ ತೀರ್ಮಾನವನ್ನು ವಿರೋಧಿಸಿ ಅಂದಿನ ದಿವಾನರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ತಮ್ಮ ದಿವಾನ ಪದವಿಗೆ ರಾಜೀನಾಮೆ ನೀಡಿರುವುದನ್ನು ನೆನಪಿಸಿಕೊಳ್ಳಬೇಕು.

ದೇಶ ಸ್ವಾತಂತ್ರ್ಯ ಪಡೆದ ನಂತರ ನಮ್ಮ ರಾಜ್ಯದಲ್ಲಿ ಮೀಸಲಾತಿ ಬಗ್ಗೆ ಅಧ್ಯಯನಕ್ಕಾಗಿ ನಾಗನಗೌಡ ಸಮಿತಿಯನ್ನು ರಚಿಸಲಾಯಿತು. ಆನಂತರದಲ್ಲಿ ಹಾವನೂರು ಆಯೋಗ, ವೆಂಕಟ ಸ್ವಾಮಿ ಆಯೋಗ, ಚೆನ್ನಪ್ಪರೆಡ್ಡಿ ಆಯೋಗ ಮೊದಲಾಗಿ ಹಲವಾರು ಸಮಿತಿಗಳು, ಆಯೋಗಗಳು ಹಲವಾರು ರೀತಿಯ ವರದಿಗಳನ್ನೂ, ಶಿಫಾರಸುಗಳನ್ನೂ ಸಲ್ಲಿಸಿವೆ. ದೇಶದಲ್ಲಿ ಕೂಡ ಕಾಕಾಕಾಲೇಲ್ಕರ್ ಆಯೋಗ, ಮಂಡಲ್ ಆಯೋಗ, ಸಾಚಾರ್ ಆಯೋಗ ಮೊದಲಾಗಿ ಹಲವು ಆಯೋಗಗಳ ವರದಿಗಳು ಸಲ್ಲಿಕೆಯಾಗಿವೆ. ಆದರೆ ಈ ಎಲ್ಲಾ ವರದಿಗಳು, ಶಿಫಾರಸುಗಳಿದ್ದರೂ ಇಂದಿನವರೆಗೂ ನಿಜವಾದ ಹಿಂದುಳಿದ ಮತ್ತು ದುರ್ಬಲ ಜನಾಂಗದವರಿಗೆ ನ್ಯಾಯ ದೊರೆತಿಲ್ಲವೆಂಬುದು ವಿಷಾದನೀಯ ವಿಚಾರ.

ಈಗ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಮತ್ತು ಪಂಗಡಗಳು ತಮ್ಮ ತೋಲ್ಬಳದ ಮೂಲಕ ಸ್ವತಃ ಹಿಂದುಳಿಯುವಿಕೆಯ ಹಣೆಪಟ್ಟಿ ಕಟ್ಟಿ ದುರ್ಬಲರ ಹಕ್ಕನ್ನು ಕಸಿಯುವ ಸಂಚನ್ನು ಹೂಡಿವೆ. ನಿಜವಾದ ಹಿಂದುಳಿದ ವರ್ಗಗಳನ್ನು ಗುರುತಿಸಲು ಬೇಕಾದ ಕುಲಶಾಸ್ತ್ರ ಅಧ್ಯಯನದ ಸಮೇತ ಎಲ್ಲಾ ರೀತಿಯ ಅಧ್ಯಯನಗಳು ಈಗ ಆಧುನಿಕ ತಂತ್ರಜ್ಞಾನದ ನೆರವಿನಿಂದ ಸುಲಭ ಸಾಧ್ಯವಾಗಿದೆ. ಭಾರತದ ಮುಸ್ಲಿಮರು ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಕೇಳುತ್ತಿಲ್ಲ. ಈ ದೇಶದ ಜನ ಪಥದೊಂದಿಗೆ ಬೆರೆತಿರುವ ಹಲವಾರು ಜಾತಿ ಪಂಗಡಗಳು ಇಸ್ಲಾಮನ್ನು ತಮ್ಮ ಧರ್ಮವನ್ನಾಗಿ ಒಪ್ಪಿಕೊಂಡಿವೆ. ಆದರೆ ಅವರು ತಮ್ಮ ಪರಂಪರೆಯನ್ನು ಮುಂದುವರಿಸಿದ್ದಾರೆ. ಈಗಲೂ ಅವರು ಹಿಂದುಳಿದವರಾಗಿ, ಬುಡಕಟ್ಟು ಜನಾಂಗಗಳಾಗಿಯೇ ಉಳಿದಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ಆಯಾ ಪಂಗಡದ ಸ್ಥಿತಿಗತಿಗನುಸಾರವಾಗಿ ಎಸ್ಟಿ ಅಥವಾ ಇತರ ಹಿಂದುಳಿದ ವಿಭಾಗಕ್ಕೆ ಸೇರಿಸಬೇಕಾಗಿದೆ. ಈ ಬಗ್ಗೆ ನಿರಂತರ ಅಧ್ಯಯನಕ್ಕಾಗಿ ಈಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಕೂಡ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ.
ನಮ್ಮ ಸಂವಿಧಾನ ರಚನಾ ಸಂದರ್ಭದಲ್ಲಿ ನಡೆದ ಚರ್ಚೆ ವೇಳೆ ಹಿಂದುಳಿದ ವರನ್ನು ಗುರುತಿಸುವಾಗ ಮುಸ್ಲಿಮರು ಕೂಡ ಅದರಲ್ಲಿ ಒಳಗೊಂಡಿರುವುದಾಗಿ ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್‌ರವರು ಉತ್ತರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಮೀಸಲಾತಿಯು ಪ್ರಪಂಚ ಉಳಿಯುವವರೆಗೂ ಮುಂದುವರಿಯಬೇಕೆಂಬ ಅಭಿಪ್ರಾಯ ನಮ್ಮದಲ್ಲ. ಆದರೆ ನಿಜವಾಗಿ ಅರ್ಹರಾದವರಿಗೆ ಮೀಸಲಾತಿ ದೊರಕಬೇಕಾದದ್ದು ಅವರ ಹಕ್ಕಾಗಿದೆ. ದುರ್ಬಲ ವರ್ಗದವರ ಹಕ್ಕನ್ನು ಸಬಲರು ಕಸಿದುಕೊಳ್ಳಬಾರದು ಎಂಬುದು ನಮ್ಮ ನಿಲುವು.
ಎಲ್ಲ ರಂಗಗಳಲ್ಲೂ ಖಾಸಗೀಕರಣವಾಗುತ್ತಿರುವ ಇಂದಿನ ದಿನಗಳಲ್ಲಿ ಸರಕಾರಿ ಕ್ಷೇತ್ರವು ದೊಡ್ಡ ಉದ್ಯೋಗದಾತನಾಗಿ ಉಳಿದಿಲ್ಲ. ಸರಕಾರದ ಎಲ್ಲಾ ರೀತಿಯ ಸಹಾಯ, ಸಹಕಾರ, ಬೆಂಬಲ ಪಡೆದು ಖಾಸಗಿ ಕ್ಷೇತ್ರವು ಹೆಮ್ಮರವಾಗಿ ಬೆಳೆದು ಅತಿದೊಡ್ಡ ಉದ್ಯೋಗದಾತನಾಗಿ ಮೂಡಿಬರುತ್ತಿದೆ. ಈ ಹೊತ್ತಿನಲ್ಲಿ ಸಾಮಾಜಿಕ ನ್ಯಾಯವು ನಿಜವಾಗಬೇಕಾದರೆ ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ಜಾರಿಯಾಗಬೇಕು. ನಮ್ಮ ಹೋರಾಟವು ಈ ದಿಸೆಯಲ್ಲಿ ಕೂಡ ಸಾಗಬೇಕಾಗಿದೆ.

Writer - ಎ.ಎಸ್.ಇ.ಕರೀಂ

contributor

Editor - ಎ.ಎಸ್.ಇ.ಕರೀಂ

contributor

Similar News