ಬಿಜೆಪಿಯ ದುರಂಹಕಾರದ ನೂರು ದಿನಗಳು ನಮ್ಮ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ

Update: 2021-03-06 15:39 GMT

ಹೊಸದಿಲ್ಲಿ,ಮಾ.6: ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ನೂರು ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್,ಈ ಅವಧಿಯು ರೈತರನ್ನು ನಡೆಸಿಕೊಂಡ ರೀತಿಗಾಗಿ ದೇಶದ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವಾಗಿದೆ ಮತ್ತು ಆಡಳಿತ ಬಿಜೆಪಿಯ ದುರಹಂಕಾರದ ನೂರು ದಿನಗಳನ್ನು ಸಂಕೇತಿಸಿದೆ ಎಂದು ಹೇಳಿದೆ.

ದೇಶದ ಗಡಿಗಳಲ್ಲಿ ಯೋಧರು ತಮ್ಮ ಜೀವಗಳಿಗೆ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರ ಹೆತ್ತವರಿಗಾಗಿ ದಿಲ್ಲಿಯ ಗಡಿಗಳಲ್ಲಿ ಮೊಳೆಗಳನ್ನು ಅಳವಡಿಸಲಾಗಿದೆ. ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದರೆ ಸರಕಾರವು ಅವರ ವಿರುದ್ಧ ದೌರ್ಜನ್ಯಗಳನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಗಾಂಧೀಜಿ,ಸರ್ದಾರ್ ವಲ್ಲಭಭಾಯಿ ಪಟೇಲ್,ಜವಾಹರಲಾಲ್ ನೆಹರು,ಲಾಲ್ ಬಹಾದೂರ್ ಶಾಸ್ತ್ರಿ ಮತ್ತು ಶಹೀದ್ ಭಗತ್ ಸಿಂಗ್ ಅವರು ತೋರಿಸಿದ್ದ ದಾರಿಯಲ್ಲಿ ತಮ್ಮ ಹಕ್ಕುಗಳು ಮತ್ತು ಗೌರವಕ್ಕಾಗಿ ಅನ್ನದಾತರ ಹೋರಾಟ ನೂರು ದಿನಗಳನ್ನು ಪೂರೈಸಿದೆ. ಇದು ಬಿಜೆಪಿ ಸರಕಾರದ ದುರಂಹಕಾರ,ರೈತರ ಮೇಲಿನ ದಾಳಿಗಳು,ಅನ್ನದಾತರ ಕುರಿತು ಸುಳ್ಳುಗಳು ಮತ್ತು ಅಪಹಾಸ್ಯಗಳ ನೂರು ದಿನಗಳೂ ಆಗಿವೆ ಎಂದು ಅವರು ಟ್ವೀಟಿಸಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ  ವಕ್ತಾರ ಪವನ್ ಖೇರಾ ಅವರು ‘ರೈತರು ಪ್ರತಿಕೂಲ ಹವಾಮಾನದಲ್ಲಿಯೂ ಸರಕಾರದ ಬಲವನ್ನು ಎದುರಿಸಿ ಕಳೆದ ನೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಮತ್ತು ಸರಕಾರಿ ಪರ ಮಾಧ್ಯಮಗಳಿಂದ ಅವಮಾನಗಳನ್ನೂ ಅವರು ಎದುರಿಸಿದ್ದಾರೆ. ಇಂದು ಮಾಧ್ಯಮಗಳಿಂದ ರೈತರ ಬವಣೆಗಳನ್ನು,ಅವರ ಪ್ರತಿಭಟನೆಯ ವರದಿಗಳನ್ನು ಅಳಿಸಿಹಾಕುವ ಪ್ರಯತ್ನಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ ’ ಎಂದು ಹೇಳಿದರು.

‘ರೈತರು ಇಂದು ಕರಾಳ ದಿನವನ್ನು ಆಚರಿಸುತ್ತಿದ್ದಾರೆ. ಇದು ಶಾಂತಿಯುತ ಪ್ರತಿಭಟನೆಗೆ ಭಂಗವನ್ನುಂಟು ಮಾಡಲು ಎಲ್ಲ ಪ್ರಯತ್ನಗಳನ್ನೂ ನಡೆಸಿದ ನಮ್ಮ ಪ್ರಜಾಪ್ರಭುತ್ವದ ಕರಾಳ ಅಧ್ಯಾಯವೆಂದು ನಾವು ಭಾವಿಸಿದ್ದೇವೆ ’ಎಂದರು.

ನೂತನ ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News