ಉತ್ತರಾಖಂಡ ದುರಂತಕ್ಕೆ ಭಾರೀ ಮಳೆ, ತಾಪಮಾನ ಹೆಚ್ಚಳ ಕಾರಣ: ವರದಿ

Update: 2021-03-06 18:11 GMT

ಹೊಸದಿಲ್ಲಿ, ಮಾ.6: ಚಮೋಲಿ ಪ್ರದೇಶದಲ್ಲಿ ಫೆಬ್ರವರಿ 4ರಿಂದ 6ರವರೆಗೆ ಸುರಿದ ಭಾರೀ ಮಳೆ ಹಾಗೂ ರಾಜ್ಯದಲ್ಲಿ ಕಳೆದ 4 ದಶಕಗಳಲ್ಲಿ ತಾಪಮಾನ ಹೆಚ್ಚಳವಾಗಿರುವುದು ಉತ್ತರಾಖಂಡದಲ್ಲಿ ಕಳೆದ ತಿಂಗಳು ಸಂಭವಿಸಿದ ಹಿಮಪಾತ ಹಾಗೂ ಅನಿರೀಕ್ಷಿತ ಪ್ರವಾಹ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಐಸಿಐಎಂಒಡಿ ಅಧ್ಯಯನ ವರದಿ ಹೇಳಿದೆ.

ಉತ್ತರಾಖಂಡ ದುರಂತ ಘಟನೆಗೆ ಕಾರಣದ ಬಗ್ಗೆ ಕಾಠ್ಮಂಡು ಮೂಲದ ‘ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೈನ್ ಡೆವಲಪ್‌ಮೆಂಟ್(ಐಸಿಐಎಂಒಡಿ) ಸಂಸ್ಥೆಯ ತಂಡ ನಡೆಸಿದ ಅಧ್ಯಯನದ ವರದಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ . ಹಿಮಾಲಯ-ಹಿಂದುಕುಷ್ ಪ್ರದೇಶದಲ್ಲಿ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸುವ ಪ್ರಾದೇಶಿಕ ಸಂಸ್ಥೆ ಇದಾಗಿದ್ದು ಭಾರತ, ಚೀನಾ, ಪಾಕಿಸ್ತಾನ, ಅಪಘಾನಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ದೇಶಗಳ ಸಹಿತ 8 ಸದಸ್ಯರನ್ನು ಹೊಂದಿದೆ.

 ಈ ಪ್ರದೇಶದಲ್ಲಿ ದುರಂತಕ್ಕೂ ಮುನ್ನ ಭೂಮಿ ಮತ್ತು ಬಂಡೆಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಬಂಡೆಕಲ್ಲು ಕಳಚಿಕೊಳ್ಳಲು ಹಾಗೂ ರೌಂಟಿ ಪರ್ವತದಲ್ಲಿ ಗುಡ್ಡಕುಸಿಯಲು ಮೂಲ ಕಾರಣವಾಗಿದೆ. ಕಳಚಿಬಿದ್ದ ಬಂಡೆಕಲ್ಲು ಹಾಗೂ ಹಿಮಗಡ್ಡೆಯ ಜೊತೆಗೆ ಕೆಸರು ನೀರು ಹರಿದು ಬಂದು ಕೆಳಗಿರುವ ನದಿಯಲ್ಲಿ ಅನಿರೀಕ್ಷಿತ ಪ್ರವಾಹಕ್ಕೆ ಕಾರಣವಾಗಿದೆ. 1.6 ಕಿ.ಮೀ ಎತ್ತರದಿಂದ ಕಲ್ಲುಬಂಡೆಗಳು ಕುಸಿದು ಬಿದ್ದಾಗ ಉಂಟಾದ ಘರ್ಷಣೆಯು ಹಿಮವನ್ನು ಕರಗಿಸುವ ಶಾಖವನ್ನು ಉತ್ಪಾದಿಸಿದೆ. ಹಿಮಕಲ್ಲು, ಕೆಸರು, ಕಲ್ಲು ಮಣ್ಣಿನ ಧಾರೆ ಪರ್ವತದ ಕೆಳಗಿರುವ ರಿಶಿಗಂಗಾ ನದಿಯನ್ನು ಸೇರಿ ಏಕಾಏಕಿ ಪ್ರವಾಹ ಸೃಷ್ಟಿಸಿದೆ ಎಂದು ವರದಿ ಹೇಳಿದೆ.

ಹಿಮದ ಹೊದಿಕೆಯ ಅಭಾವ, ಸೂರ್ಯನ ವಿಕಿರಣದ ಪ್ರಭಾವ ಹೆಚ್ಚಿದ್ದು ಮತ್ತು ಹಿಮ ಕರಗುವ ಆವರ್ತನೆ ಹೆಚ್ಚಾಗಿದ್ದರಿಂದ ಬಂಡೆಕಲ್ಲು ಹಿಡಿತ ಕಳೆದುಕೊಂಡಿದೆ. ಜೊತೆಗೆ, ಈ ಪ್ರಕರಣಕ್ಕೆ ಕೆಲ ದಿನಗಳ ಹಿಂದೆ ಭಾರೀ ಹಿಮಪಾತವಾಗಿರುವುದು ಬಂಡೆ ಬಿರುಕುಬಿಡಲು ಕಾರಣವಾಗಿದೆ. ಫೆಬ್ರವರಿ 4ರಿಂದ 6ರವರೆಗೆ ಕಾಶ್ಮೀರ ಮತ್ತು ವಾಯವ್ಯ ಭಾರತದಾದ್ಯಂತ ಬೀಸಿದ ಬಿರುಗಾಳಿಯೂ ಹಿಮಪಾತಕ್ಕೆ ಪೂರಕ ಪರಿಸ್ಥಿತಿ ನಿರ್ಮಿಸಿದೆ. ಜಾಗತಿಕ ಮಳೆ ಮಾಪನ ಕೇಂದ್ರದಿಂದ ಲಭಿಸಿದ ಅಂಕಿಅಂಶದ ಪ್ರಕಾರ, ಫೆಬ್ರವರಿ 3ರಿಂದ 5ರವರೆಗೆ ಈ ಪ್ರದೇಶದಲ್ಲಿ ಮಳೆಯ ಮುನ್ಸೂಚನೆಯಿತ್ತು ಮತ್ತು ಫೆಬ್ರವರಿ 4ರಿಂದ 6ರ ಅವಧಿಯಲ್ಲಿ ಸುಮಾರು 58 ಮಿಮೀ ಮಳೆ ಸುರಿದಿದೆ. ಚಮೋಲಿ ಪ್ರದೇಶದಲ್ಲಿ ಮಳೆಯ ಪೂರಕ ವಾತಾವರಣ ಹಿಮಪಾತಕ್ಕೆ ಕಾರಣವಾಗಿರಬಹುದು.

   ಜೊತೆಗೆ, ಉತ್ತರಾಖಂಡದಲ್ಲಿ ತಾಪಮಾನವೂ ನಿರಂತರ ಹೆಚ್ಚುತ್ತಿದೆ. ಚಮೋಲಿ ಪ್ರದೇಶದಲ್ಲಿ ಗರಿಷ್ಟ ತಾಪಮಾನ 1980-2018ರ ಮಧ್ಯೆ, ಪ್ರತೀ ವರ್ಷ 0.032 ಡಿಗ್ರಿ ಸೆಲ್ಶಿಯಸ್ ಪ್ರಮಾಣದಲ್ಲಿ ಹೆಚ್ಚಾಗಿದೆ. 2021ರ ಜನವರಿಯಲ್ಲಿ ತಾಪಮಾನ ಅತ್ಯಂತ ಗರಿಷ್ಟ ಮಟ್ಟಕ್ಕೇರಿತ್ತು. ಚಮೋಲಿ ಪ್ರದೇಶದಲ್ಲಿ ಸಂಭವಿಸಿದ ದುರಂತ ಪ್ರಕರಣಕ್ಕೆ ಹವಾಮಾನ ಬದಲಾವಣೆ ಮಾತ್ರ ನೇರ ಕಾರಣ ಎಂದು ಹೇಳಲಾಗದು. ಮಣ್ಣಿನಡಿಯ ಹೆಪ್ಪುಗಟ್ಟಿದ ಪದರದಲ್ಲಿರುವ ಮಂಜುಗಡ್ಡೆ ಕರಗುವ ಆವರ್ತ(ಅವಧಿ)ದಲ್ಲಿ ಆದ ಬದಲಾವಣೆಯೂ ಈ ದುರಂತಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಹಿಮಪಾತದ ದುರಂತ ಸಂಭವಿಸಿದ ಪ್ರದೇಶದಿಂದ ಇದುವರೆಗೆ 72 ಮೃತದೇಹ ಹಾಗೂ 30 ಮಾನವ ದೇಹಗಳ ಅವಶೇಷ ಪತ್ತೆಯಾಗಿದ್ದು 41 ಮೃತದೇಹಗಳ ಗುರುತು ಪತ್ತೆಯಾಗಿದೆ. ಇನ್ನೂ 132 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News